ಬ್ರಹ್ಮಾವರ ತಾಲೂಕು ಕೋಟ ಪಡುಕರೆಯಲ್ಲಿ ಶಬರಿಮಲೆ ಯಾತ್ರೆ ಮುಗಿಸಿಕೊಂಡು ಬಂದ ಯುವಕ ಬಳಿಕ ಸ್ನೇಹಿತರೊಂದಿಗೆ ಸೇರಿಕೊಂಡು ಭರ್ಜರಿ ಪಾರ್ಟಿ ನಡೆಸಿದ್ದು, ಈ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ.
ಆಕ್ಸಿಸ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂತೋಷ್ ಪೂಜಾರಿ (30) ಕೊಲೆಯಾದ ಯುವಕ. ಆತ ಶಬರಿಮಲೆ ಯಾತ್ರೆ ಮುಗಿಸಿ ಮಾಲೆ ತೆಗೆದ ಬಳಿಕ ಸ್ನೇಹಿತರೊಂದಿಗೆ ಸೇರಿ ಪಾರ್ಟಿ ಮಾಡಿದ್ದು, ಕುಡಿದು ಬಿರಿಯಾನಿ ತಿನ್ನುವಷ್ಟರಲ್ಲಿ ಕ್ಷುಲ್ಲಕ ಕಾರಣ ಶುರುವಾದ ಗಲಾಟೆಗೆ ಸಂತೋಷ್ ಕೊಲೆಯಾಗಿ ಹೋಗಿದ್ದಾನೆ.
ಸಂತೋಷ್ ಪೂಜಾರಿ, ಸಚಿನ್, ಚೇತನ್, ಕೌಶಿಕ್, ಸುಜನ್ ಹಾಗೂ ದರ್ಶನ್ ಒಟ್ಟಿಗೆ ಊಟ ಮಾಡುವಾಗ ಸಂತೋಷ್ ಅವರ ಕುಟುಂಬ ವಿಚಾರ ಹಾಗೂ ಕುಡಿತದ ವಿಷಯದಲ್ಲಿ ದರ್ಶನ್, ಕೌಶಿಕ್, ಅಂಕಿತ್ ಹಾಗೂ ಸುಜನ್ ನಡುವೆ ಮಾತಿನ ಚಕಮಕಿ ನಡೆದಿದೆ. ಅವಾಚ್ಯ ಪದ ಬಳಸಿ ಜಗಳ ತಾರಕಕ್ಕೇರಿದ್ದು, ನಾಲ್ವರು ಸೇರಿ ಸಂತೋಷ್ ಮೇಲೆ ಹಲ್ಲೆಗೈದು ಕೊಲೆ ಮಾಡಿದ್ದಾರೆ.
ದರ್ಶನ್ ಎಂಬಾತ ಸಂತೋಷ್ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದಿದ್ದು, ಕೌಶಿಕ್ ಕೂಡ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ರಜತ್ ಜಗಳ ತಡೆಯಲು ಯತ್ನಿಸಿದರೂ ಸಂತೋಷ್ ಸ್ಥಳದಲ್ಲೇ ಕುಸಿದು ಬಿದ್ದಿದ್ದ.ಗಾಬರಿಯಾದ ಉಳಿದವರು ಅಲ್ಲಿಂದ ಪರಾರಿಯಾಗಿದ್ದಾರೆ. ರಜತ್, ಸಚಿನ್, ಚೇತನ್ ಹಾಗೂ ಪ್ರಕಾಶ್ ಕಾರಿನಲ್ಲಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ. ವೈದ್ಯರು ಪರೀಕ್ಷಿಸಿ ಸಂತೋಷ್ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು, ದರ್ಶನ್ (21), ಕೌಶಿಕ್ (21), ಅಂಕಿತ (19), ಸುಜನ್ (21) ಎಂಬವರನ್ನು ಬಂಧಿಸಿದ್ದಾರೆ. ಸಂತೋಷ್ ಮೊದಲೇ ಹೃದಯ ರೋಗದಿಂದ ಬಳಲುತ್ತಿದ್ದು, ಇತ್ತೀಚಿಗಷ್ಟೇ ಸ್ಟಂಟ್ ಹಾಕಿಸಿಕೊಂಡಿದ್ದ ಎಂಬುದು ಗೊತ್ತಾಗಿದೆ.


