Menu

ಸಂಸತ್‌ ಮುಂಗಾರು ಅಧಿವೇಶನ: ಪಹಲ್ಗಾಂ ದಾಳಿ, ಟ್ರಂಪ್‌ ಹೇಳಿಕೆ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು, ಗದ್ದಲಕ್ಕೆ ಕಲಾಪ ಮುಂದೂಡಿಕೆ

ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭಗೊಂಡಿದ್ದು, ಮೊದಲ ದಿನವೇ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಟ್ರಂಪ್ ಹೇಳಿಕೆ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದವು. ಸದನದಲ್ಲಿ ತೀವ್ರ ಗದ್ದಲವುಂಟಾಗಿ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂದರೂ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದವು.

ಲೋಕಸಭೆಯಲ್ಲಿ ಸ್ಪೀಕರ್‌ ವಿಪಕ್ಷ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ಏ.22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚಿಸಲು ಆಗ್ರಹಿಸಿದವು. ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯ ಬಗ್ಗೆಯೂ ಚರ್ಚೆಗೆ ಒತ್ತಾಯಿಸಿದವು. ಹೀಗಾಗಿ ಉಭಯ ಸದನಗಳಲ್ಲೂ ತೀವ್ರ ಗದ್ದಲ ಉಂಟಾದ ಕಾರಣ ಎರಡೂ ಕಲಾಪಗಳನ್ನು ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರು, ಪ್ರಶ್ನೋತ್ತರ ಅವಧಿಯಲ್ಲಿ ಪಹಲ್ಗಾಮ್‌ ದಾಳಿಯ ಕುರಿತು ಚರ್ಚೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಚರ್ಚೆಗಳಿಗೆ ಅಡ್ಡಿಯುಂಟಾಗಿದ್ದರಿಂದ ಸ್ಪೀಕರ್ ಓಂ ಬಿರ್ಲಾ ಮಧ್ಯಾಹ್ನ 2 ಗಂಟೆವರೆಗೆ ಅಧಿವೇಶನವನ್ನು ಮುಂದೂಡುವುದಾಗಿ ಘೋಷಿಸಿದರು. ಪ್ರತಿಪಕ್ಷಗಳ ಸದಸ್ಯರ ತೀವ್ರ ಗದ್ದಲದ ನಡುವೆಯೇ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸರ್ಕಾರ ಪಹಲ್ಗಾಮ್‌ ದಾಳಿ ಮತ್ತು ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ಬಗ್ಗೆ ಚರ್ಚೆ ನಡೆಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಭರವಸೆ ನೀಡಿದರು. ರಾಜ್ಯಸಭೆಯಲ್ಲೂ ಪ್ರತಿಪಕ್ಷ ಸದಸ್ಯರು ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಗ್ಗೆ ಚರ್ಚೆಗೆ ಪಟ್ಟು ಹಿಡಿದರು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು “ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಹೇಳಿಕೆಗಳು ದೇಶಕ್ಕೆ ಮಾಡಿದ ಅವಮಾನ”‌ ಎಂದು ಕಿಡಿ ಕಾರಿದರು. ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಜೆ.ಪಿ. ನಡ್ಡಾ ಅವರು, ಕಾಂಗ್ರೆಸ್ ಪ್ರಮುಖ ವಿಷಯಗಳಿಂದ ವಿಮುಖವಾಗಿದೆ ಎಂದು ಆರೋಪಿಸಿದರು.  ಲೋಕಸಭೆ ಕಲಾಪ ಮುಂದೂಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಸದನದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮಾತನಾಡಲು ಅವಕಾಶ ಇದೆ ಎಂದಾದರೆ ಪ್ರತಿಪಕ್ಷ ಸದಸ್ಯರಿಗೂ ಮಾತನಾಡಲು ಅವಕಾಶ ಇದೆ. ಸ್ಪೀಕರ್‌ ಕೇವಲ ಆಡಳಿತ ಪಕ್ಷಕ್ಕೆ ಮಾತ್ರ ಮಾತನಾಡಲು ಅವಕಾಶ ನೀಡುವುದನ್ನು ಸಹಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಅಧಿವೇಶನದಲ್ಲಿ ಎಂಟು ಹೊಸ ಮಸೂದೆಗಳನ್ನು ಪರಿಚಯಿಸಲಾಗುವುದು ಮತ್ತು ಬಾಕಿ ಇರುವ ಎಂಟು ಮಸೂದೆಗಳನ್ನು ಸಹ ಚರ್ಚೆಗೆ ತೆಗೆದುಕೊಳ್ಳಲಾಗುವುದು. ಪಹಲ್ಗಾಮ್‌ ದಾಳಿಯ ಚರ್ಚೆ ಕುರಿತು ಆಡಳಿತ ಮತ್ತು ಪ್ರತಿ ಪಕ್ಷ ಸದಸ್ಯರ ನಡುವೆ ಅಧಿವೇಶನದುದ್ದಕ್ಕೂ ಜಟಾಪಟಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಅಧಿವೇಶನವು ಆಗಸ್ಟ್ 21 ರವರೆಗೆ ಮುಂದುವರಿಯಲಿದ್ದು, ಆಗಸ್ಟ್ 12 ರಿಂದ ಆಗಸ್ಟ್ 18 ರವರೆಗೆ ಮಧ್ಯಂತರ ವಿರಾಮ ತೆಗೆದುಕೊಳ್ಳಲಿದೆ.

Related Posts

Leave a Reply

Your email address will not be published. Required fields are marked *