ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ತಂಬಾಕು ಹಾಗೂ ಮಾದಕ ವಸ್ತು ಪೂರೈಕೆ ಮಾಡ್ತಿದ್ದ ವಾರ್ಡನ್ ಕಲ್ಲಪ್ಪ ಎಂಬಾತನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಬಂಧಿಸಿರುವ ಪೊಲೀಸರು 100 ಗ್ರಾಂ ಹಾಶಿಶ್ ಆಯಿಲ್ ಜಪ್ತಿ ಮಾಡಿದ್ದಾರೆ. ಖಾಕಿ ಪ್ಯಾಂಟ್ ನಲ್ಲಿ ಸೆಲ್ಲೋಟೇಪ್ ಸುತ್ತಿ ಹಾಶಿಶ್ ಆಯಿಲ್ ಇರಿಸಿರುವುದು ಪತ್ತೆಯಾಗಿದೆ. ಆರೋಪಿ ಕಲ್ಲಪ್ಪ ನೈಟ್ ಶಿಫ್ಟ್ ನಲ್ಲಿ ಪರಪ್ಪನ ಅಗ್ರಹಾರ ವಾರ್ಡನ್ ಆಗಿದ್ದ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಯಾರಿಂದ ಮಾದಕ ವಸ್ತು ಖರೀದಿಸಿದ್ದ, ಯಾರಿಗೆ ಪೂರೈಕೆ ಮಾಡುತ್ತಿದ್ದ ಎಂದು ತನಿಖೆ ನಡೆಸುತ್ತಿದ್ದಾರೆ.
ಮಾಜಿ ಸೈನಿಕರ ಕೋಟಾದಲ್ಲಿ ಕಲ್ಲಪ್ಪ 2018 ರಲ್ಲಿ ಕಾರಾಗೃಹ ಇಲಾಖೆಗೆ ಸೇರಿದ್ದ. ಕಳೆದ ಕೆಲವು ತಿಂಗಳುಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಕೆಲಸ ಮಾಡುತ್ತಿದ್ದ. ನೈಟ್ ಶಿಫ್ಟ್ ಡ್ಯೂಟಿಗೆ ಬರುವ ವೇಳೆ ಸಿಐಎಸ್‌ಎಫ್ ಸಿಬ್ಬಂದಿ ಕಲ್ಲಪ್ಪನನ್ನು ತಪೊಆಸಣೆ ನಡೆಸಿದಾಗ ತಂಬಾಕು ಹಾಗೂ ಹಾಶಿಶ್ ಆಯಿಲ್ ಪತ್ತೆಯಾಗಿದೆ.
ಇಬ್ಬರು ಮಹಿಳೆಯರ ಕೊಲೆಗೈದಾತ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ
ಜಾರ್ಖಂಡ್ನಲ್ಲಿ ಇಬ್ಬರು ಮಹಿಳೆಯರನ್ನು ಕೊಂದು ಜೈಲು ಸೇರಿದ್ದ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗಿರಿದಿಹ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಆರೋಪಿ ಶ್ರೀಕಾಂತ್ ಚೌಧರಿಯನ್ನು ಬಂಧಿಸಿದ್ದರು. ಒಂದು ದಿನದೊಳಗೆ ಆತ ಪೊಲೀಸ್ ಠಾಣೆಯ ಕಾನ್ಫರೆನ್ಸ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಪೊಲೀಸರು ಇದು ಆತ್ಮಹತ್ಯೆ ಎಂದು ಹೇಳಿಕೊಂಡರೂ, ಸ್ಥಳೀಯರು ಅವರ ಗಂಟಲಿನಲ್ಲಿ ಗಾಯದ ಗುರುತುಗಳಿವೆ ಎಂದು ಆರೋಪಿಸಿದ್ದಾರೆ. ಆರೋಪಿಯನ್ನು ಲಾಕಪ್ ಬದಲಿಗೆ ಕಾನ್ಫರೆನ್ಸ್ ಕೊಠಡಿಯಲ್ಲಿ ಏಕೆ ಇರಿಸಲಾಗಿತ್ತು ಎಂಬ ಬಗ್ಗೆಯೂ ಪ್ರಶ್ನಿಸಿದ್ದಾರೆ.