ಧಾರವಾಡದ ಹೊರವಲಯದಲ್ಲಿ ಎರಡು ದಿನದ ಹಿಂದೆ ಝಕಿಯಾ ಎಂಬ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಕೊಲೆಯಾಗಿರುವ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಕೊಲೆಗಾರನನ್ನು ಪತ್ತೆ ಹಚ್ಚಿದ್ದಾರೆ. ಆಕೆಯನ್ನು ಮದುವೆಯಾಗಬೇಕಿದ್ದ ಸಂಬಂಧಿ ಸಾಬೀರ್ ಮುಲ್ಲಾ ಎಂಬಾತ ಮದುವೆ ವಿಚಾರವಾಗಿ ನಡೆದ ಜಗಳದಲ್ಲಿ ಆಕೆಯ ವೇಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದು ಬಯಲಾಗಿದೆ.
ಮನಸೂರು ರಸ್ತೆಯ ಡೈರಿ ಬಳಿ ಪತ್ತೆಯಾಗಿದ್ದ 21 ವರ್ಷದ ಝಕಿಯಾ ಮುಲ್ಲಾ ಹತ್ಯೆ ಪ್ರಕರಣದ ತನಿಖೆಯನ್ನು ಧಾರವಾಡ ಗ್ರಾಮೀಣ ಪೊಲೀಸರು ಕೈಗೆತ್ತಿಕೊಂಡು ಕೊಲೆಗಾರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡದ ಗಾಂಧಿ ಚೌಕ ನಿವಾಸಿ ಝಕಿಯಾ ಪ್ಯಾರಾಮೆಡಿಕಲ್ ಓದು ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದರು. ಜನವರಿ 20ರಂದು ಲ್ಯಾಬ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಬಂದಿದ್ದ ಆಕೆ ರಾತ್ರಿಯಾದರೂ ಮರಳಿರಲಿಲ್ಲ. ಮರುದಿನಗ್ಗೆ ಶಾಸಕ ವಿನಯ್ ಕುಲಕರ್ಣಿ ಡೈರಿ ಬಳಿ ಯುವತಿಯ ಶವ ಪತ್ತೆಯಾಗಿತ್ತು.
ಹತ್ಯೆ ನಡೆದ ಸ್ಥಳದಲ್ಲಿದ್ದ ಆರೋಪಿ ಸಾಬೀರ್ ಮುಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದನು. ಸ್ಥಳಕ್ಕೆ ಪೊಲೀಸರು ಬಂದಾಗಲೂ ಅಲ್ಲೇ ಇದ್ದು ಏನೂ ಅರಿಯದವನಂತೆ ನಟಿಸಿದ್ದ. ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ.
ಝಕಿಯಾ ಮತ್ತು ಸಾಬೀರ್ ಮುಲ್ಲಾ ಸಂಬಂಧಿಕರಾಗಿದ್ದು, ಇವರಿಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ಮಾತುಕತೆ ನಡೆಸಿದ್ದರು. ಜನವರಿ 20ರ ಸಂಜೆ ಇಬ್ಬರೂ ಸುತ್ತಾಡಲು ಹೋಗಿದ್ದರು. ಈ ವೇಳೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿ ಸಾಬೀರ್, ಯುವತಿಯ ವೇಲ್‌ನಿಂದಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಸಾಬೀರ್ ಮುಲ್ಲಾನನ್ನು ಬಂಧಿಸಿರುವ ಪೊಲೀಸರು ಈ ಕೃತ್ಯದಲ್ಲಿ ಆತನಿಗೆ ಮತ್ಯಾರಾದರೂ ನೆರವಾಗಿದ್ದಾರಾ ಎಂಬ ಬಗ್ಗೆ ಮತ್ತೊಬ್ಬ ಯುವಕನ ವಿಚಾರಣೆ ನಡೆಸುತ್ತಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


