ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ ವಿರೋಧಿಸಿ ಸೆ.27ರಂದು ಪಂಚಮಸಾಲಿ ಸಮಾಜದ ಶಾಸಕರು ಬಾಗಲಕೋಟೆಯಲ್ಲಿ ಸಭೆ ನಡೆಸಲಿದ್ದಾರೆ.
ಸ್ವಾಮೀಜಿ ಉಚ್ಛಾಟನೆಗೆ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅಂದಿನ ಸಭೆಯಲ್ಲಿ ಸ್ವಾಮೀಜಿಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲು ಶಾಸಕರುಗಳು ನಿರ್ಧರಿಸಿದ್ದಾರೆ. ತಮ್ಮನ್ನು ಯಾರು ಉಚ್ಛಾಟನೆ ಮಾಡಲು ಸಾಧ್ಯವಿಲ್ಲ. ಭಕ್ತರು ಹೇಗೆ ಹೇಳುತ್ತಾರೋ ಹಾಗೆ ಕೇಳುವೆ. ಟ್ರಸ್ಟ್ ಗೂ ಹಾಗೂ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಟ್ರಸ್ಟ್ ನ ಕಟ್ಟಡದಿಂದ ಹೊರ ಹಾಕಿರಬಹುದು ಭಕ್ತರ ಮನಸ್ಸಿನಿಂದಲ್ಲ ಎಂದು ಬಸವಜಯ ಮೃತ್ಯುಂಜಯ ಶ್ರೀ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಚಾಟಿಸಿದ ಬಳಿಕ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ, ಅಕ್ರಮ ಆಸ್ತಿ ಗಳಿಕೆ, ಲಿಂಗಾಯತ ಧರ್ಮವಿರೋಧಿ ಹೇಳಿಕೆ ಸೇರಿದಂತೆ ಸ್ವಾಮೀಜಿ ಮೇಲೆ ಹಲವು ಆರೋಪ ಹೊರಿಸಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು.
ಸಮುದಾಯದ ಮುಖಂಡರ ಕಾರ್ಯಕಾರಿಣಿ ಸಭೆಯಲ್ಲಿ ಸ್ವಾಮೀಜಿ ಉಚ್ಚಾಟನೆ ತೀರ್ಮಾನ ಮಾಡಲಾಗಿದ್ದು, ಅವರು ಕ್ರಿಯಾಶೀಲರಾಗಿ ಇರಲಿಲ್ಲ, ಸ್ವಾಮೀಜಿ ಇರಬೇಕಾದ ರೀತಿಯಲ್ಲೂ ಇಲ್ಲ, ಸ್ವಾಮೀಜಿ ಬಗ್ಗೆ ಬಹಳಷ್ಟು ದೂರು ಇವೆ, ಅವರು ಟ್ರಸ್ಟ್ ಮಾತು ಕೇಳುತ್ತಿರಲಿಲ್ಲ ಎಂದು ಅಸೂಟಿ ಹೇಳಿದ್ದರು.
ಸ್ವಾಮೀಜಿ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ, ಬೈಲಾದ ವಿರುದ್ಧವಾಗಿ ಆಸ್ತಿ ಮಾಡಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ. 2014 ರಲ್ಲಿ ನೋಟಿಸ್ ನೀಡಿದ್ದೇವೆ. ಪೂರ್ಣ ಬಹುಮತದ ಟ್ರಸ್ಟ್ ಈಗ ನಿರ್ಣಯ ಕೈಗೊಂಡಿದೆ ಎಂದಿದ್ದರು.
ಸ್ವಾಮೀಜಿಗೆ ಕಾರು ಸೇರಿ ಎಲ್ಲ ಸವಲತ್ತು ಕೊಡಿಸಿದ್ದೇವೆ. ಆದರೆ ಸ್ವಾಮೀಜಿ ಬಸವತತ್ವಕ್ಕೆ ವಿರುದ್ಧ ಮಾಡಿದ್ದಾರೆ. ಬಸವತತ್ವ ನಾವು ಯಾವತ್ತೂ ಹಿಂದೂ ಎನ್ನುವುದಿಲ್ಲ. ಹಿಂದೂ ಧರ್ಮದ ಅನಿಷ್ಠಗಳ ವಿರುದ್ಧವೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ಆದರೆ ಸ್ವಾಮೀಜಿ ಹಿಂದೂ ಪದ ಬಳಕೆ ಮಾಡ್ತಾರೆ ಎಂದು ಅಸೂಟಿ ದೂರಿದ್ದಾರೆ.
ಕಾಶಪ್ಪನವರನ್ನು ಬೆಂಬಲಿಸಲಿಲ್ಲ ಅನ್ನುವ ವಿಚಾರಕ್ಕೆ ಉಚ್ಛಾಟನೆ ಆಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಸೂಟಿ, ಅವರು ಗೆದ್ದೇ ಗೆಲ್ತಾರೆ. ರಾಜಕೀಯದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಕಾಶಪ್ಪನವರ ಯಂಗ್ ಆಗಿದ್ದು, ಕೆಲಸ ಮಾಡ್ತಾರೆ ಎಂದಿದ್ದಾರೆ.
ನಮ್ಮನ್ನ ಉಚ್ಚಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಎಐ ತಂತ್ರಜ್ಞಾನ ಬಳಸಿ ವೀಡಿಯೊ ಕ್ರಿಯೇಟ್ ಮಾಡಿರಬಹುದು. ಅದಕ್ಕೆ ನಾವು ಹೆದರುವುದಿಲ್ಲ, ಕುಗ್ಗುವುದಿಲ್ಲ. ಹೊಸ ಮಠ ಕಟ್ಟುಲು ಶೀಘ್ರ ಸಭೆ ಕರೆಯಲಾಗುವುದು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಈಗಾಗಲೇ ಹೇಳಿದ್ದಾರೆ.
ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಸ್ವಾಮೀಜಿ ಸೇರಿದಂತೆ ಹಲವು ಮುಖಂಡರು, ಭಕ್ತರ ಸಮ್ಮುಖನಡೆದ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಪರಮಾತ್ಮನಿಗೆ ಬಿಟ್ಟರೇ ನಮ್ಮನ್ನ ಉಚ್ಚಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಭಕ್ತರಿಗೆ ಮಾತ್ರ ಉಚ್ಚಾಟನೆ ಮಾಡುವ ಅಧಿಕಾರ ಇದೆ. ನಾನು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ. ಪೀಠಕ್ಕೂ ಟ್ರಸ್ಟ್‌ಗೂ ಯಾವುದೇ ಸಂಬಂಧ ಇಲ್ಲ. ಪೀಠವನ್ನು ಯಾವುದೇ ಕಲ್ಲು ಮಣ್ಣಿನಲ್ಲಿ ಕಟ್ಟಿಲ್ಲ. ಭಕ್ತರ ತೀರ್ಮಾನವೇ ಅಂತಿಮ. ನಾನು ಕೂಡಲಸಂಗಮದಲ್ಲೇ ಇರುತ್ತೇನೆ, ಇಲ್ಲಿಂದಲೇ ಸಮಾಜ ಸಂಘಟನೆ ಮಾಡ್ತೇನೆ. ಕೂಡಲಸಂಗಮ ಮತ್ತು ದಾವಣಗೆರೆಯಲ್ಲಿ ಭಕ್ತರು ಕೊಟ್ಟ ಜಾಗ ಮಾತ್ರ ನನ್ನ ಹೆಸರಲ್ಲಿದೆ. ಮತ್ತೆಲ್ಲೂ ನನ್ನ ಹೆಸರಲ್ಲಿ ಜಾಗ ಇಲ್ಲ ಎಂದು ಹೇಳಿದ್ದಾರೆ.