ಇತ್ತೀಚೆಗೆ ಧಾರವಾಡದ ಶಿವಗಿರಿ ಬಳಿ ರೈಲು ಹಳಿಗೆ ಬಿದ್ದು ಪಲ್ಲವಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಡಿದ್ದ ಊಹಾಪೋಹಗಳಿಗೆ ಈಗ ತೆರೆ ಬಿದ್ದಿದೆ. ಆಕೆ ಬರೆದಿಟ್ಟ ಡೆತ್‌ನೋಟ್‌ನಲ್ಲಿ ಸುಸೈಡ್ ಮಾಡಿಕೊಳ್ಳಲು ಕಾರಣ ಏನು ಎಂಬುದು ಪತ್ತೆಯಾಗಿದೆ.
ಸರ್ಕಾರಿ ಹುದ್ದೆಗಳ ನೇಮಕಾತಿ ವಿಳಂಬಕ್ಕೆ ಬೇಸತ್ತು ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಊಹಾಪೋಹಗಳು ಕೇಳಿಬಂದಿದ್ದವು ಆದರೆ ಅದು ನಿಜವಲ್ಲ ಎಂಬುದು ಗೊತ್ತಾಗಿದೆ. ಅವರು ಡೆತ್‌ನೋಟ್‌ನಲ್ಲಿ ತಮ್ಮ ಸಾವಿಗೆ ಕಾರಣಗಳನ್ನು ಉಲ್ಲೇಖಿಸಿ ದ್ದಾರೆ. ತಾನು ಕಳೆದ ಕೆಲವು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೌಟುಂಬಿಕ ಸಮಸ್ಯೆಗಳೂ ಕಾಡುತ್ತಿವೆ ಎಂಬುದಾಗಿ ಪತ್ರದಲ್ಲಿ ಬರೆದಿದ್ದಾರೆ. ಈ ವೈಯಕ್ತಿಕ ನೋವುಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ದ್ದಾರೆ.
ಡೆತ್‌ನೋಟ್‌ನಲ್ಲಿ ಪಲ್ಲವಿ ತಂದೆ-ತಾಯಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನನಗೆ ಯಾವತ್ತೂ ನೀವು ಪ್ರೀತಿ ನೀಡಿಲ್ಲ. ಹಾಸ್ಟೆಲ್ನಲ್ಲೇ ಬೆಳೆಸಿದ್ದೀರಿ.ನನ್ನ ಬೇಕು ಮತ್ತು ಬೇಡಗಳನ್ನು ನೀವು ಕೇಳದ ಕಾರಣ ನಾನು ನೊಂದಿದ್ದೇನೆ. ಎಂದು ಬರೆದಿದ್ದಾರೆ. ಮತ್ತೊಂದು ಡೆತ್‌ನೋಟ್‌ನಲ್ಲಿ ತಾನು ಪ್ರೀತಿಸುತ್ತಿದ್ದ ಯುವಕನ ಬಳಿ ಪಲ್ಲವಿ ಕ್ಷಮೆ ಕೇಳಿದ್ದಾಳೆ. ನಮ್ಮವರು ನಿನ್ನೊಡನೆ ಬದುಕಲು ಅವಕಾಶ ಕೊಡಲಿಲ್ಲ. ಮನಸ್ಸಿಗೆ ನೋವಾಗಿದೆ. ನನ್ನನ್ನು ಕ್ಷಮಿಸು, ನನ್ನ ಸಾವಿಗೆ ನಾನೇ ಕಾರಣ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.
ಪಲ್ಲವಿ ಮತ್ತು ಬಳ್ಳಾರಿ ತಾಲೂಕಿನ ದಮ್ಮೂರು ಕಗ್ಗಲ್ಲು ಗ್ರಾಮದ ಯುವಕ ಪ್ರೀತಿಸುತ್ತಿದ್ದರು. ವಿಷಯವನ್ನು ಪಲ್ಲವಿ ಮನೆಯಲ್ಲೂ ಪ್ರಸ್ತಾಪಿಸಿದ್ದು, ಕುಟುಂಬ ವಿರೋಧ ವ್ಯಕ್ತಪಡಿಸಿತ್ತು. ತಾಯಿಯ ಸಂಬಂಧಿಕರೊಬ್ಬರ ಜೊತೆ ಪಲ್ಲವಿಯ ಮದುವೆ ನಿಶ್ಚಯ ಮಾಡಲಾಗಿತ್ತು. ಹೀಗಾಗಿ ಆಕೆ ಬಹಳ ನೊಂದಿರುವ ವಿಷಯ ತನಿಖೆ ವೇಳೆ ಗೊತ್ತಾಗಿದೆ.
ಪ್ರಕರಣದ ಕುರಿತು ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಪಲ್ಲವಿ ಸರ್ಕಾರಿ ಹುದ್ದೆಗಳ ನೇಮಕಾತಿ ವಿಳಂಬಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಅಪಪ್ರಚಾರ. ಆಕೆಯ ಡೆತ್ ನೋಟ್ ನಲ್ಲಿ ಅಂತಹ ಉಲ್ಲೇಖವಿಲ್ಲ. ಆರೋಗ್ಯ ಮತ್ತು ಕುಟುಂಬದ ಕಾರಣಗಳಿಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಇಂತಹ ಘಟನೆಗಳನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸವನ್ನು ಯಾರೂ ಮಾಡಬಾರದು. ಸತ್ಯಾಸತ್ಯತೆ ಅರಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗು ವುದು ಎಂದು ಎಚ್ಚರಿಕೆ ನೀಡಿದ್ದಾರೆ. ಧಾರವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.


