ಏಷ್ಯಾಕಪ್ ಟೂರ್ನಿಯ ವೇಳೆ ಆಟಗಾರರು ತೋರಿದ ದುರ್ವರ್ತನೆ ಹಿನ್ನೆಲೆಯಲ್ಲಿ ಐಸಿಸಿ ಭಾರತದ ಮೂವರು ಮತ್ತು ಪಾಕಿಸ್ತಾನದ ಇಬ್ಬರು ಆಟಗಾರರಿಗೆ ದಂಡ ವಿಧಿಸಿದೆ. ಹ್ಯಾರಿಸ್ ರೌಫ್ ಗೆ ಅತೀ ಕಠಿಣ ದಂಡ ವಿಧಿಸಲಾಗಿದೆ.
ಕಳೆದ ತಿಂಗಳು ದುಬೈನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಸೆಪ್ಟೆಂಬರ್ ೧೪, ೨೧ ಮತ್ತು ೨೮ರಂದು ಮುಖಾಮುಖಿ ಆಗಿದ್ದವು. ಈ ಮುಖಾಮುಖಿ ವೇಳೆ ಎರಡೂ ತಂಡಗಳ ಆಟಗಾರರು ಮೈದಾನದಲ್ಲಿ ಅನುಚಿತವಾಗಿ ವರ್ತಿಸಿ ನಿಯಮ ಉಲ್ಲಂಘಿಸಿದ್ದರು. ಪಾಕಿಸ್ತಾನದ ಇಬ್ಬರು ಹಾಗೂ ಭಾರತದ ಮೂವರು ಆಟಗಾರರ ಮೇಲಿನ ದೂರಿನ ಕುರಿತು ವಿಚಾರಣೆ ನಡೆಸಿದ ಐಸಿಸಿ ಇಂದು ತೀರ್ಪು ಪ್ರಕಟಿಸಿದೆ.
ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಹ್ಯಾರಿಸ್ ರೌಫ್ ಗೆ ೨ ಪಂದ್ಯ ನಿಷೇಧ ಹಾಗೂ ಪಂದ್ಯ ಶುಲ್ಕದ ಶೇ.30ರಷ್ಟು ದಂಡ ವಿಧಿಸಲಾಗಿದೆ. ಮತ್ತೊಬ್ಬ ಆಟಗಾರ ಸಾಹಿಬ್ಜಾದಾ ಫರ್ಹಾನ್ ಗೆ ಕೇವಲ ಎಚ್ಚರಿಕೆ ನೀಡಲಾಗಿದೆ.
ಹ್ಯಾರಿಸ್ ರೌಫ್ ಮೊದಲ ಪಂದ್ಯದಲ್ಲಿ ಬ್ಯಾಟ್ ಗನ್ ರೀತಿ ಹಿಡಿದು ಸಂಭ್ರಮಿಸಿದರೆ, ನಂತರ ಬೆರಳಲ್ಲಿ 6-0 ಎಂದು ತೋರಿಸಿ ಭಾರತದ ವಿಮಾನಗಳು ಆಪರೇಷನ್ ಸಿಂಧೂರ್ ವೇಳೆ ಪತನಗೊಂಡಿವೆ ಎಂದು ಸನ್ಹೆ ಮಾಡಿದ್ದರು. ಈ ಬಗ್ಗೆ ಬಿಸಿಸಿಐ ದೂರು ನೀಡಿತ್ತು.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸುದ್ದಿಗೋಷ್ಠಿಯಲ್ಲಿ ಪೆಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಗೆಲುವು ಅರ್ಪಿಸುವುದಾಗಿ ಹೇಳಿಕೆ ನೀಡಿದ್ದರು. ಕ್ರೀಡೆಯಲ್ಲಿ ರಾಜಕೀಯ ಬೆರೆಸಿದ್ದಕ್ಕಾಗಿ ಸೂರ್ಯಕುಮಾರ್ ಯಾದವ್ ಗೆ ಶೇ.30ರಷ್ಟು ದಂಡ ವಿಧಿಸಲಾಗಿದೆ. ಭಾರತ ತಂಡದ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ವಿಮಾನ ಬಿದ್ದ ರೀತಿ ಸನ್ನೆ ಮಾಡಿ ಪಾಕಿಸ್ತಾನ ಆಟಗಾರನಿಗೆ ಸೂಚಿಸಿದ್ದಕ್ಕಾಗಿ ಐಸಿಸಿ ರ್ಯಾಂಕಿಂಗ್ ನಲ್ಲಿ ಒಂದು ಅಂಕ ಕಡಿತ ಮಾಡಲಾಗಿದೆ. ಮತ್ತೊಬ್ಬ ವೇಗಿ ಅರ್ಷದೀಪ್ ಸಿಂಗ್ ಗೆ ಎಚ್ಚರಿಕೆ ನೀಡಲಾಗಿದೆ.


