ನವದೆಹಲಿ:ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತ ಸಿಂಧೂ ಜಲ ಒಪ್ಪಂದ ರದ್ದು, ಭಾರತ-ಪಾಕ್ ಗಡಿ ಬಂದ್ ವೀಸಾ ರದ್ದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಗುರುವಾರ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ, ಉನ್ನತ ನಾಗರಿಕ ಮತ್ತು ಮಿಲಿಟರಿ ಸಭೆಯು ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನಿ ವಾಯುಪ್ರದೇಶವನ್ನು ನಿರ್ಬಂಧಿಸುವುದು ಮತ್ತು ವಾಘಾ ಗಡಿಯನ್ನು ಮುಚ್ಚುವುದು ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿತು.
ಹಾಗೇ, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಬಲವನ್ನು 30 ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಇಳಿಸಲಾಗುವುದು ಎಂದು ಪಾಕಿಸ್ತಾನ ಸರ್ಕಾರ ದೃಢಪಡಿಸಿದೆ. ಪಾಕಿಸ್ತಾನದ ಪ್ರಧಾನಿ ಸಚಿವಾಲಯ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಬಲವನ್ನು ಏಪ್ರಿಲ್ 30, 2025ರಿಂದ ಜಾರಿಗೆ ಬರುವಂತೆ 30 ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಇಳಿಸಲಾಗುವುದು. ಪಾಕಿಸ್ತಾನದ ಮೂಲಕ ಯಾವುದೇ ಮೂರನೇ ದೇಶಕ್ಕೆ ಮತ್ತು ಅಲ್ಲಿಂದ ಭಾರತಕ್ಕೆ ಬರುವ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಬುಧವಾರ ಭಾರತದ ಭದ್ರತಾ ಸಚಿವ ಸಂಪುಟ ಸಮಿತಿಯು ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡ ನಂತರ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ. ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಭಾರತದ ಆರೋಪಗಳನ್ನು “ರಾಜಕೀಯ ಪ್ರೇರಿತ” ಮತ್ತು “ಕಾನೂನುಬಾಹಿರ” ಎಂದು ಪಾಕಿಸ್ತಾನ ಟೀಕಿಸಿದೆ. ಸಿಖ್ ಯಾತ್ರಿಕರನ್ನು ಹೊರತುಪಡಿಸಿ ಭಾರತೀಯ ಪ್ರಜೆಗಳಿಗೆ ಎಲ್ಲಾ ಸಾರ್ಕ್ ವೀಸಾಗಳನ್ನು ಅಮಾನತುಗೊಳಿಸಲಾಗಿದೆ. ವಾಘಾ ಗಡಿಯನ್ನು ಮುಚ್ಚಲಾಗಿದೆ. ಭಾರತೀಯ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಪಾಕಿಸ್ತಾನ ಘೋಷಿಸಿದೆ.