ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸಿ ಪ್ರವಾಸಿಗರನ್ನು ಹತ್ಯೆ ಮಾಡಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಭಾರತವು ತನ್ನ ನೆಲದಿಂದ ಪಾಕ್ ಪ್ರಜೆಗಳನ್ನು ತವರಿಗೆ ವಾಪಸ್ ಆಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಆದರೆ ಪಾಕಿಸ್ತಾನವು ತನ್ನಲ್ಲಿಗೆ ಬರುತ್ತಿರುವ ತನ್ನ ಪ್ರಜೆಗಳನ್ನು ಮಾತ್ರ ಅಟ್ಟಾರಿ ಗಡಿ ಮುಚ್ಚಿ ತ್ರಿಶಂಕು ಸ್ಥಿತಿಗೆ ತಳ್ಳಿದೆ. ಏ.30ರೊಳಗೆ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿಗಳಿಗೆ ವಾಘಾ ಗಡಿ ಮೂಲಕ ಭಾರತ ತೊರೆಯುವಂತೆ ಸರ್ಕಾರ ಆದೇಶಿಸಿದೆ. ಪಾಕಿಸ್ತಾನ ಅಟ್ಟಾರಿ ಗಡಿಯನ್ನು ಗುರುವಾರ ಮುಚ್ಚಿದ್ದು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಅನೇಕ ಪಾಕ್ ಪ್ರಜೆಗಳು ನೆಲೆಯಿಲ್ಲದೆ ಗಡಿಯ ಎದುರು ನಿಂತು ಕಣ್ಣೀರು ಹಾಕುತ್ತಿದ್ದಾರೆ.
ಅಟ್ಟಾರಿ-ವಾಘಾ ಗಡಿಯನ್ನು ಗುರುವಾರದಿಂದ ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡಲಾಗಿದೆ. ದೇಶ ಬಿಡಲು ಪಾಕಿಸ್ತಾನಿಗಳಿಗೆ ನೀಡಿದ್ದ ಏ.30ರ ಗಡುವನ್ನು ಭಾರತ ಸರ್ಕಾರ ಮುಂದಿನ ಆದೇಶದವರೆಗೂ ವಿಸ್ತರಿಸಿದೆ. ಹೀಗಾಗಿ ತವರಿಗೆ ತೆರಳದೇ ಇದ್ದರೆ 3 ಲಕ್ಷ ರು.ದಂಡ ಮತ್ತು 3 ವರ್ಷ ಜೈಲು ಶಿಕ್ಷೆಯಿಂದ ತಕ್ಷಣಕ್ಕೆ ಅವರೆಲ್ಲ ಬಚಾವ್ ಆಗಿದ್ದಾರೆ.
ದಾಳಿ ಬಳಿಕ ಭಾರತವು ಪಾಕಿಸ್ತಾನದ ಜತೆಗಿನ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದ್ದಲ್ಲದೆ, ಪಾಕಿಸ್ತಾನಿಯರಿಗೆ ನೀಡಿದ್ದ ಅಲ್ಪಾವಧಿ ವೀಸಾ ರದ್ದು ಮಾಡಿ ಏಳು ದಿನದಲ್ಲಿ ಪಾಕಿಸ್ತಾನಿಯರು ಭಾರತ ತೊರೆಯುವಂತೆ ಸೂಚಿಸಿತ್ತು. ಪಾಕ್ ಕೂಡ ಭಾರತೀಯರ ತಾತ್ಕಾಲಿಕ ವೀಸಾ ರದ್ದುಮಾಡಿತ್ತು. ಬಳಿಕ ಏಳು ದಿನಗಳಲ್ಲಿ ಭಾರತದಿಂದ 917 ಮಂದಿ ಪಾಕಿಸ್ತಾನಕ್ಕೆ ವಾಪಸಾದರೆ, ಪಾಕಿಸ್ತಾನದಿಂದ 1617 ಮಂದಿ ಭಾರತೀಯರು ಹಾಗೂ 224 ಪಾಕಿಸ್ತಾನಿಯರು(ದೀರ್ಘಾವಧಿ ವೀಸಾ ಹೊಂದಿರುವವರು) ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಬಂದಿದ್ದಾರೆ.