ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ನಿಯಂತ್ರಣ ರೇಖೆ ಉದ್ದಕ್ಕೂ ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ 12 ನಾಗರಿಕರು ಮೃತಪಟ್ಟಿದ್ದಾರೆ. ೫೦ ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಆಗಿದ್ದಾರೆ.
ಬುಧವಾರ ತಡರಾತ್ರಿ ಆರಂಭವಾದ ಶೆಲ್ ದಾಳಿಯು ಭಾರತದ ಮುಂಚೂಣಿ ಠಾಣೆಗಳು ಮತ್ತು ಹತ್ತಿರದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದಿದೆ. ಮೋರ್ಟರ್ ಗುಂಡುಗಳು ಮತ್ತು ಫಿರಂಗಿ ಗುಂಡಿನ ದಾಳಿಗಳು ಹಳ್ಳಿಗಳ ಬಳಿ ಹೊರ ಚಿಮ್ಮಿವೆ.
ಭಾರತದ ಇತ್ತೀಚಿನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯೆಯಾಗಿರುವ ಕೃತ್ಯ ಸ್ಪಷ್ಟ ಕದನ ವಿರಾಮ ಉಲ್ಲಂಘನೆ ಮತ್ತು ಉದ್ದೇಶಪೂರ್ವಕ ಪ್ರಚೋದನೆ ಎಂದು ಭಾರತೀಯ ಅಧಿಕಾರಿಗಳು ಖಂಡಿಸಿದ್ದಾರೆ.
ಪೂಂಚ್ ಮಾತ್ರವಲ್ಲದೆ ರಜೌರಿ ಜಿಲ್ಲೆ ಹಾಗೂ ಕುಪ್ವಾಡ ಜಿಲ್ಲೆಯ ಉರಿ, ಕರ್ನಾಹ್, ತಂಗಧರ್ ಸೆಕ್ಟರ್‌ಗಳಲ್ಲಿಯೂ ತೀವ್ರ ಗುಂಡಿನ ದಾಳಿ ನಡೆದಿದೆ. ಫಿರಂಗಿ ಗಳನ್ನು ಬಳಸಿಯೂ ದಾಳಿ ನಡೆಸಲಾಗಿದ್ದು, ಗಡಿ ಭಾಗದಲ್ಲಿರುವ ಮನೆಗಳು, ಅರಣ್ಯ ಇಲಾಕೆ ಮತ್ತು ವಿಶ್ವಸಂಸ್ಥೆಯ ಕಟ್ಟಡಗಳು, ಗುರುದ್ವಾರ ಹಾನಿಗೊಂಡಿವೆ. ಢಾಕಿ ಗ್ರಾಮದ ೧೫೦ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.