ಆಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದ್ದರಿಂದ 40ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ.
ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಗಡಿಯಲ್ಲಿರುವ ಕಂದಹಾರ್ ಪ್ರಾಂತ್ಯದ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ.
ಕಂದಹಾರ್ ನ ಬಲೂಕ್ ಜಿಲ್ಲೆಯ ಪ್ರದೇಶಗಳ ಮೇಲೆ ಬುಧವಾರ ಬೆಳಿಗ್ಗೆ ಪಾಕಿಸ್ತಾನ ಹಗುರ ಯುದ್ಧ ವಿಮಾನಗಳ ಮೂಲಕ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ 40 ಮಂದಿ ನಾಗರಿಕರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 80 ಮಂದಿ ಮಹಿಳೆಯರು ಹಾಗೂ 20 ಮಕ್ಕಳು ಎಂದು ಹೇಳಲಾಗಿದೆ.
ಇದೇ ವೇಳೆ ಕಾಬೂಲ್ ನಲ್ಲಿ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಸ್ಫೋಟಗೊಂಡು ಭಾರೀ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.
ಸಂಘರ್ಷ ಆರಂಭವಾಗಿರುವ ಕುರಿತು ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪರಸ್ಪರ ಆರೋಪ ಪ್ರತ್ಯಾರೋಪ ನಡೆಸಿದ್ದು, 48 ಗಂಟೆಗಳ ಕದನ ವಿರಾಮ ಘೋಷಿಸಲಾಗಿದೆ.
ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಗಳು ಬುಧವಾರ ಸಂಜೆ ಯಶಸ್ವಿ ಮಾತುಕತೆ ನಡೆಸಿ 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದವು.