ಪಾಕಿಸ್ತಾನದ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನದ ಸರ್ಕಾರಿ ನೌಕರನನ್ನು ಬಂಧಿಸಲಾಗಿದೆ. ಖಾನ್ ಗಡಿ ಪ್ರದೇಶದ ಬರೋಡಾ ಗ್ರಾಮದ ಶಕುರ್ ಖಾನ್ ಮಂಗನಿಯಾರ್ ಬಂಧಿತ ಸರ್ಕಾರಿ ನೌಕರ.
ಜೈಸಲ್ಮೈರ್‌ನಲ್ಲಿರುವ ಕಚೇರಿಯಲ್ಲೇ ಸಿಐಡಿ ಮತ್ತು ಗುಪ್ತಚರ ಸಂಸ್ಥೆಗಳ ತಂಡವು ಜಂಟಿಯಾಗಿ ಬಂಧಿಸಿವೆ. ಈತನ ಮೇಲೆ ಬಹಳ ದಿನಗಳಿಂದ ನಿಗಾ ಇಡಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಜೈಪುರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ, ಎರಡೂ ತನಿಖಾ ತಂಡಗಳು ಜಂಟಿಯಾಗಿಯೇ ವಿಚಾರಣೆ ನಡೆಸಲಿವೆ.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನೊಂದಿಗೆ ಸಂಪರ್ಕದಲ್ಲಿದ್ದ ಎಂಬುದು ಪತ್ತೆಯಾಗಿದೆ. ಪಾಕಿಸ್ತಾನಕ್ಕೆ ಸಂಬಂಧಿಸಿದ ಫೋನ್ ಸಂಖ್ಯೆಗಳು (+92 ರಿಂದ ಪ್ರಾರಂಭವಾಗುವ ಮೊಬೈಲ್ ಸಂಖ್ಯೆಗಳು) ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಶಕುರ್ ಖಾನ್ ಗುಪ್ತಚರ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಂತೆ ಮೊಬೈಲ್ ಮತ್ತು ಡಿಜಿಟಲ್ ಡಿವೈಸ್‌ಗಳಲ್ಲಿದ್ದ ಹಲವಾರು ಪ್ರಮುಖ ಫೈಲ್‌ಗಳನ್ನು ಡಿಲೀಟ್ ಮಾಡಲಾಗಿದೆ. ಹೀಗಾಗಿ ಆತನ ಮೊಬೈಲ್‌ನಿಂದ ಯಾವುದೇ ಸೂಕ್ಷ್ಮ ಮಾಹಿತಿಗಳು ರವಾನೆಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಆತನ ಬ್ಯಾಂಕ್ ಖಾತೆ ಮೇಲೂ ನಿಗಾ ವಹಿಸಲಾಗಿದೆ. ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ ಎರಡು ವಾರಗಳಲ್ಲಿ ಒಟ್ಟು ಬಂಧಿತ ಪಾಕಿಸ್ತಾನಿ ಸ್ಪೈಗಳ ಸಂಖ್ಯೆ 16 ದಾಟಿದೆ.