ಅಂಕೋಲಾ: ಸಾವಿರಾರು ಜಾನಪದ ಹಾಡುಗಳಿಗೆ ದನಿಯಾಗಿ ಹಾಲಕ್ಕಿ ಜಾನಪದ ಕಂಪನ್ನು ದೇಶದ್ಯಂತ ಪಸರಿಸಿದ ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ಪುರಸ್ಕರತ ಜಾನಪದ ಕೋಗಿಲೆ ಸುಕ್ರಿ ಬೊಮ್ಮ ಗೌಡ (88) ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಗುರುವಾರ ಸಂಜೆ ಸರ್ಕಾರಿ ಗೌರವಾಧರಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಸ್ಥಳೀಯ ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.
ಸಾವಿರಾರು ಹಾಡುಗಳ ಒಡತಿಯಾಗಿ ತಾಲೂಕಿನ ಜನಪದ ಸೊಗಡನ್ನು ದೇಶಕ್ಕೆ ಪರಿಚಯಿಸಿ ಗಮನ ಸೆಳೆದಿದ್ದ ತಾಲೂಕಿನ ಬಡಗೇರಿಯ ಸುಕ್ರಿ ಬೊಮ್ಮ ಗೌಡ ಅನಾರೋಗ್ಯದ ಕಾರಣ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಕಳೆದ ಹಲವಾರು ದಿನಗಳಿಂದ ಅನಾರೋಗ್ಯ ಹಿನ್ನಲೆಯಲ್ಲಿ ಹಲವು ಬಾರಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಅದರೆ ಚಿಕಿತ್ಸೆಗೆ ಚಿಕಿತ್ಸೆಗೆ ಸ್ಪಂದಿಸದ ಸುಕ್ರಿ ಗೌಡ ಇಂದು ಅಸುನೀಗಿದ್ದಾರೆ.
ಯಾವುದೇ ಪ್ರಶಸ್ತಿಗೆ ಆಸೆ ಪಡದೆ ತನ್ನ ಕಾರ್ಯವನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದ ಅವರಿಗೆ ಆಸಂಖ್ಯ ಪ್ರಶಸ್ತಿಗಳು ಲಭಿಸಿದ್ದವು. ಅವುಗಳಲ್ಲಿ ದೇಶದ ಅತ್ಯುನ್ನತ ಗೌರವ ಪದ್ಮಶ್ರೀ ಕೂಡ ಒಂದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ 2017 ರಲ್ಲಿ ಸುಕ್ರಜ್ಜಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು, ಜೊತೆಗೆ ನಾಡೋಜ, ರಾಜ್ಯೋತ್ಸವ, ಜಾನಪದ ಶ್ರೀ ಪ್ರಶಸ್ತಿಗಳು ಸೇರಿದಂತೆ ನೂರಾರು ಪ್ರಶಸ್ತಿಗಳು ಸುಕ್ರಜ್ಜಿಯನ್ನು ಅರಸಿ ಬಂದಿದ್ದವು.
ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಸುಕ್ರಜ್ಜಿ ಕಳ್ಳಬಟ್ಟಿ ಸಾರಾಯಿ ಸಂಪುರ್ಣ ತೊಲಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಕ್ಷಣಾ ಇಲಾಖೆಯ ವಿಮಾನ ನಿಲ್ದಾಣ ನಿರಾಶ್ರಿತರ ಪರವಾಗಿ ನಿಂತು ನೊಂದವರ ದನಿಯಾಗಿ ಹೋರಾಟ ಮಾಡಿದರು. ಜೀವನದ ಕೊನೆಯ ಗಳಿಗೆಯ ವರೆಗೂ ಸಾಮಾಜಿಕ ಹೊರಾಟಗಳಲ್ಲಿ ತಮ್ಮ ಸಹಾಭಾಗಿತ್ವ ಪ್ರದರ್ಶಿಸಿದ ಇವರು ಯಾವುದೇ ಸಂದರ್ಭದಲ್ಲಿಯೂ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಶೋಷಿತರ ಪರವಾಗಿ ನಿಂತವರಾಗಿದ್ದರು.
ಹಾಲಕ್ಕಿ ಗೌಡರ ಅಸ್ತಿತ್ವ ಭದ್ರವಾಗಿಸಿದ ಸುಕ್ರಿ ಗೌಡ:
ಕೇವಲ ಕೆಲವೇ ಪ್ರದೇಶಗಳಲ್ಲಿ ಮಾತ್ರ ಗುರುತಿಸಲ್ಪಟ್ಟ ಹಾಲಕ್ಕಿ ಗೌಡ ಎಂಬ ಸಮಾಜವನ್ನು ದೇಶಾದ್ಯಂತ ಗುರುತಿಸುವಂತೆ ಮಾಡಿದ್ದು ಸುಕ್ರಿ ಗೌಡ. ಜಾನಪದ ಹಾಡುಗಳ ಮೂಲಕ ದೇಶಾದ್ಯಂತ ಗುರುತಿಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರಿಂದ ಮೆಚ್ಚುಗೆ ಗಳಿಸಿಕೊಂಡವರು ಸುಕ್ರಿ ಗೌಡ. ಇವರ ಅಗಲಿಕೆಗೆ ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದು ಅಗಲಿದ ಆತ್ಮಕ್ಕೆ ಚಿರ ಶಾಂತಿಯನ್ನು ಕೋರಿದ್ದಾರೆ.
ಸುಕ್ರಿ ಗೌಡರ ಅಂತಿಮ ದರ್ಶನಕ್ಕಾಗಿ ಮಾಜಿ ಶಾಸಕರಾದ ರೂಪಾಲಿ ನಾಯ್ಕ, ಆನಂದ್ ಅಸ್ನೊಟಿಕರ್, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಶೀಲ್ದಾರ್ ಬಿ. ಅನಂತ ಶಂಕರ್, ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಕಾರವಾರ ಅಂಕೋಲಾ ಪೊಲೀಸ್ ವೃಂದ, ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು ಅಂತಿಮ ನಮನ ಸಲ್ಲಿಸಿದರು.