Menu

ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಇನ್ನಿಲ್ಲ

ಪದ್ಮಶ್ರೀ ಪುರಸ್ಕೃತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಸುಕ್ರಿ ಬೊಮ್ಮ ಗೌಡ (88) ನಿಧನರಾಗಿದ್ದಾರೆ. ಸುಕ್ರಜ್ಜಿ ಎಂದೇ ಅವರು ಜನಪ್ರಿಯರಾಗಿದ್ದರು. 5000 ಕ್ಕೂ ಹೆಚ್ಚು ಹಾಲಕ್ಕಿ ಹಾಡು ಕಂಠಪಾಠ ಮಾಡಿಕೊಂಡಿದ್ದ ಅವರು ಹಾಲಕ್ಕಿ ಹಾಡುಗಳ ಕೋಗಿಲೆ ಎಂದು ಹೆಸರು ಪಡೆದಿದ್ದರು. 2017ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯ ಗೌರವ ಲಭಿಸಿತ್ತು.

ಸುಕ್ರಿ ಬೊಮ್ಮು ಗೌಡ ಹಾಲಕ್ಕಿ ಹಾಡುಗಳಿಗೆ ಸೀಮಿತರಾಗದೆ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಒತ್ತಾಯ ಮಾಡಿದ್ದರು. ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಹಾಗೂ ಜಿಲ್ಲೆಯ ಅಭಿವೃದ್ಧಿ ಸಂಬಂಧಿಸಿದ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಸಾಕ್ಷರತೆಗಾಗಿ ಹೆಚ್ಚಿನ ಕೆಲಸ ಮಾಡಿದ್ದರು. ಮದ್ಯ ನಿಷೇಧಕ್ಕಾಗಿ ಹೋರಾಟ ಮಾಡಿದ್ದರು.

ನಿನ್ನೆ (ಬುಧವಾರ) ಸ್ಥಳೀಯ ಮಕ್ಕಳಿಗೆ ಜಾನಪದ ಹಾಡುಗಳನ್ನು ಹೇಳಿಕೊಟ್ಟಿದ್ದ ಸುಕ್ರಿ ಬೊಮ್ಮನಗೌಡ ಅವರು ಬೆಳಗಾಗುವಷ್ಟರಲ್ಲಿ ಮಲಗಿದಲ್ಲಿಯೇ ಅಸು ನೀಗಿದ್ದಾರೆ.

ಅವರಿಗೆ ಬುಡಕಟ್ಟು ಸಮುದಾಯದ ಸಂಸ್ಕೃತಿಯ ರಕ್ಷಣೆಗೆ 1988ರಲ್ಲಿ ರಾಜ್ಯ ಸರಕಾರ ಪ್ರಶಸ್ತಿ ನೀಡಿತ್ತು. 1999ರಲ್ಲಿ ಜಾನಪದ ಶ್ರೀ ಪ್ರಶಸ್ತಿ, ಕನ್ನಡ ವಿಶ್ವ ವಿದ್ಯಾನಿಲಯದಿಂದ 2006ರಲ್ಲಿ ನಾಡೋಜ ಪ್ರಶಸ್ತಿ, 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಲಾಗಿತ್ತು.

ಸಿಎಂ ಸಿದ್ದರಾಮಯ್ಯ ಸಂತಾಪ

ಖ್ಯಾತ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರ ನಿಧನ‌ದಿಂದ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ನಷ್ಟ ತುಂಬಲು ಸಾಧ್ಯವಿಲ್ಲ. ಅವರೊಬ್ಬರು ಹುಟ್ಟು ಕಲಾವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸಲ್ಲಿಸಿದ್ದಾರೆ.

ಹಾಲಕ್ಕಿ ಜಾನಪದ ಹಾಡುಗಳ ಮೂಲಕವೇ ಲೋಕಪ್ರಸಿದ್ಧರಾಗಿದ್ದ “ಸುಕ್ರಜ್ಜಿ” ಅವರಿಗೆ ಸಂಗೀತವೇ ಬದುಕಾಗಿತ್ತು. ಸಂಗೀತದ ಜೊತೆಯಲ್ಲಿ ಮಧ್ಯಪಾನ ವಿರೋಧಿ ಆಂದೋಲನದಲ್ಲಿಯೂ ಸಕ್ರಿಯರಾಗಿದ್ದ ಸುಕ್ರಿ ಬೊಮ್ಮಗೌಡ ಅವರ ಬದುಕು ಮತ್ತು ಸಾಧನೆ ಆದರ್ಶಪ್ರಾಯವಾದುದು. ಸಂಗೀತ ಕಲಾಸೇವೆಗಾಗಿ ಪದ್ಮಶ್ರೀ‌ ಪ್ರಶಸ್ತಿ ಗಳಿಸಿದ್ದ ಸುಕ್ರಜ್ಜಿ ಅವರು ಹಂಪಿ ವಿಶ್ವವಿದ್ಯಾಲಯ ನೀಡುವ ನಾಡೋಜ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತ ರಾಗಿದ್ದರು. ಸುಕ್ರಿ ಬೊಮ್ಮಗೌಡ ಅವರನ್ನು ಕಳೆದುಕೊಂಡಿರುವ ಬಂಧು ಮಿತ್ರರ ದು:ಖದಲ್ಲಿ ನಾನೂ‌ ಪಾಲ್ಗೊಂಡಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *