ಕರ್ನಾಟಕದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಶಿಕ್ಷಕರ ನೇಮಕ ಮಾಡಿಕೊಳ್ಳುವ ಬದಲಿಗೆ ಕಡಿಮೆ ಹಾಜರಾತಿ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿದ್ದು, ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿವೆ.
ಕಾಂಗ್ರೆಸ್ ಸರ್ಕಾರ ‘ಹಬ್ ಅಂಡ್ ಸ್ಪೋಕ್’ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸಂಯೋಜನೆ ಹೆಸರಿನಲ್ಲಿ ರಾಜ್ಯದ 4200 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.
ಈ ಹಿಂದೆ ಬಿಜೆಪಿ ರಾಜ್ಯ ಸರ್ಕಾರ ಕೂಡ ಇದೇ ನೆಪವೊಡ್ಡಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ಯೋಜನೆ ಕೈಬಿಟ್ಟಿತ್ತು. ಮತ್ತೆ ಸರ್ಕಾರ ಸರ್ಕಾರಿ ಶಾಲೆಗ ವಿಲೀನಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಎಐಡಿಎಸ್ಒ ರಾಜ್ಯ ಸಮಿತಿ ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿರುವುದಾಗಿ ಎಐಡಿಎಸ್ಒ ಅಧ್ಯಕ್ಷರಾದ ಅಭಯಾ ದಿವಾಕರ್ ತಿಳಿಸಿದ್ದಾರೆ.
10 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಯನ್ನು ಹಾಗೂ ಆ ಶಾಲೆಯ ಮಕ್ಕಳನ್ನು ಹೆಚ್ಚಿರುವ ಶಾಲೆಯ ಜೊತೆ ವಿಲೀನಗೊಳಿಸಲಾಗುತ್ತದೆ. ರಾಜ್ಯದಲ್ಲಿ ಸದ್ಯ 4 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಕಡಿಮೆ ಹಾಜರಾತಿ ಇದೆ. ಈ ನೆಪದಡಿ ಸಂಯೋಜನೆ ಮಾಡಿ ಮುಚ್ಚುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಿತ್ತುಕೊಳ್ಳುವ ಹುನ್ನಾರ ಇದಾಗಿದೆ. ಸರ್ಕಾರವು ಈ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಜನವಿರೋಧಿ ನಿರ್ಧಾರವನ್ನು ಕೈಬಿಡುವಂತೆ ಹಾಗೂ ಕೂಡಲೇ ಹಾಜರಾತಿ ಕಡಿಮೆಯಿರುವ ಶಾಲೆಗಳಿಗೆ ಸೌಲಭ್ಯಗಳನ್ನು ನೀಡಿ ರಕ್ಷಿಸವಂತೆ ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.