ಕೋಲಾರ: ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ ಅದನ್ನು ಅನುಸರಿಸುವವರು ಸರಿಯಿಲ್ಲದಿದ್ದರೆ, ಅದು ನಿರರ್ಥಕವಾಗುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ಕೋಲಾರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 77 ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿಶ್ವದ ವಿಶಾಲ ಮತ್ತು ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ಹೊಂದಿದ ದೇಶ ನಮ್ಮದಾಗಿದೆ. ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯದ ತಳಹದಿಯ ಮೇಲೆ ನಮ್ಮ ಸಂವಿಧಾನ ನಿಂತಿದೆ ಎಂದರು.
ನಮಗೆ ಸಂವಿಧಾನದ ಭದ್ರ ಬುನಾದಿ ಹಾಕಿಕೊಟ್ಟಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿಯಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮುನ್ನಡೆಯುತ್ತಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ಜೀವನ ಮಟ್ಟ ಸಾಕಷ್ಟು ಸುಧಾರಣೆಯಾಗಿದೆ ಎಂದು ಸಚಿವರು ತಿಳಿಸಿದರು.
ಇಂತಹ ಯಶಸ್ವಿ ಯೋಜನೆಗಳ ಬಗ್ಗೆ ಲಂಡನ್ ನ ಕಿಂಗ್ಸ್ ಕಾಲೇಜು ಮತ್ತು ಜಸ್ಟ್ ನೆಟ್ವರ್ಕ್ ನಂತಹ ಸಂಸ್ಥೆಗಳು ಅಧ್ಯಯನ ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಸರ್ಕಾರದ 6 ನೇ ಗ್ಯಾರಂಟಿಯಾಗಿ ಇ- ಖಾತಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ನಾಗರಿಕರಿಗೆ ಅವರ ಆಸ್ತಿಯ ಭದ್ರತೆಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ನಾಗರಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಸುರೇಶ್ ಕರೆ ನೀಡಿದರು.
ನಗರಾಭಿವೃದ್ಧಿ ಇಲಾಖೆಯಿಂದ ಎಲ್ಲಾ ಪಟ್ಟಣಗಳಲ್ಲಿ ಸುಸಜ್ಜಿತ ಬಡಾವಣೆ, ಸ್ಥಿರ ಮೂಲದಿಂದ ನಿರಂತರ ಕುಡಿಯುವ ನೀರು ಒದಗಿಸಲು ಚಾಲನೆ, ಘನ ತ್ಯಾಜ್ಯ ವಿಲೇವಾರಿ, ಒಳಚರಂಡಿ ವ್ಯವಸ್ಥೆ, ಇಂದಿರಾ ಕ್ಯಾಂಟೀನ್ ಚಾಲನೆ, ಪೌರಕಾರ್ಮಿಕರ ನೇಮಕಾತಿ ಮತ್ತು ಅಭಿವೃದ್ಧಿ, ಇಂಟಿಗ್ರೇಟೆಡ್ ಸ್ಮಾರ್ಟ್‌ಸಿಟಿಗೆ ಚಾಲನೆ, ಸ್ಮಾರ್ಟ್ ಸಿಟಿ, ಎಂ.ಜಿ.ಎನ್.ವಿ.ವೈ ಅಮೃತ್ ಯೋಜನೆ, ಕೆರೆಗಳ ಅಭಿವೃದ್ಧಿ ಮುಂತಾದವುಗಳನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದರು.
ಕೋಲಾರ ಜಿಲ್ಲೆಯಲ್ಲಿ ಮಳೆ ಕಡಿಮೆ ಇದ್ದರೂ, ಹೈನುಗಾರಿಕೆ ಮತ್ತು ಇತರೆ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ರೈತರು ಸ್ವಾವಲಂಬಿಯಾಗಿದ್ದಾರೆ. ಹೆಮ್ಮೆಯ ವಿಚಾರವೆಂದರೆ ನಾನಾ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಸಂಖ್ಯೆ ತುಂಬಾ ಕಡಿಮೆ ಇದೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಹಾದಿ ತಿಳಿಯದೇ ಕೃಷಿ ಕಾಯಕ ಮುಂದುವರೆಸಬೇಕೆಂದು ಸಚಿವರು ಕಿವಿಮಾತು ಹೇಳಿದರು.
ನಮ್ಮ ಸರ್ಕಾರ ಕೋಲಾರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, 80 ಕೋಟಿಗಳಲ್ಲಿ – ಅಂತರಗಂಗೆಯಿಂದ-ಕೋಲಾರಮ್ಮನ ಕೆರೆಯ ರಾಜಾ ಕಾಲುವೆ ಅಭಿವೃದ್ಧಿ, 94 ಕೋಟಿಗಳಲ್ಲಿ – ಕೋಲಾರದಲ್ಲಿ ಒಳಚರಂಡಿ ವ್ಯವಸ್ಥೆ, 3500 ಕೋಟಿಗಳಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಮತ್ತು ರಸ್ತೆ, 150 ಎಕರೆಯ ಎ.ಪಿ.ಎಂ.ಸಿ. ಮಾರುಕಟ್ಟೆ, ಡಲ್ಟ್ ವತಿಯಿಂದ ಮಾಲೂರು, ಕೆ.ಜಿ.ಎಫ್. ಬಸ್ ನಿಲ್ಧಾಣ, ಕೆ.ಜಿ.ಎಫ್. ಇಂಟಿಗ್ರೇಟೆಡ್ ಟೌನ್‌ಶಿಪ್ ಹೀಗೆ ಹತ್ತು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಮಾವು ಬೆಳೆಯ ಬೆಲೆ ಕುಸಿದಾಗ ರೈತರ ಹಾಗೂ ಸ್ಥಳೀಯ ಶಾಸಕರುಗಳ ನಿಯೋಗವನ್ನು ನಾನು ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಹೋಗಿ 14,917 ರೈತರಿಗೆ 41 ಕೋಟಿ ರೂ. ಬಿಡುಗಡೆಗೊಳಿಸಿರುತ್ತೇನೆ. ಇದು ನನ್ನಯ ಕೋಲಾರ ಶಾಸಕರುಗಳು ಮತ್ತು ನಮ್ಮ ಸರ್ಕಾರ ರೈತರಿಗೆ ಇರುವ ಬದ್ಧತೆಯಾಗಿದೆ ಎಂದು ತಿಳಿಸಿದರು.


