“ನಮ್ಮ ಪಕ್ಷ, ನಮ್ಮ ಸರ್ಕಾರವು ಯಾವುದೇ ಸಮಾಜವನ್ನು ವಿಭಜಿಸಲು ಇಚ್ಚಿಸುವುದಿಲ್ಲ. ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ನಡೆಸುತ್ತಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಹಿಂದುಳಿದ ವರ್ಗಗಳ ಆಯೋಗವು ಕಾನೂನು ಚೌಕಟ್ಟಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂಲಕ ಸಾರ್ವಜನಿಕರಿಂದ ಮಾಹಿತಿ ಪಡೆಯಲಿದೆ. ಈ ಬಗ್ಗೆ ಬಿಜೆಪಿಯವರ ಅಪಪ್ರಚಾರ ಹಾಗೂ ಸಾರ್ವಜನಿಕರ ಅಭಿಪ್ರಾಯದ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ” ಎಂದರು.
“ಸಾರ್ವಜನಿಕರು ತಮ್ಮ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಅನೇಕ ಸಮುದಾಯದವರು ಬಂದು ನಮಗೆ ಪ್ರತ್ಯೇಕ ಗುರುತು ಬೇಕು ಎಂದು ಕೇಳಿದ್ದಾರೆ. ಈ ಬಗ್ಗೆ ಕೆಲವರು ಆಕ್ಷೇಪ ಸಲ್ಲಿಸಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ರಾಜಕೀಯವಾಗಿ ಮಾತನಾಡುವವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ. ಯಾರೂ ಗಾಬರಿಪಡುವ ಅಗತ್ಯವಿಲ್ಲ” ಎಂದು ತಿಳಿಸಿದರು.