ರಾಜ್ಯ ಸರ್ಕಾರವು ಈಗ ರೂಪಿಸಿರುವ ಪ್ರಮುಖ ಮೆಟ್ರೋ ಯೋಜನೆಗಳು ಸಕಾಲದಲ್ಲಿ ಮತ್ತು ಸಮಯೋಚಿತವಾಗಿ ಕಾರ್ಯಾನುಷ್ಠಾನಗೊಂಡಲ್ಲಿ ಬೆಂಗಳೂರಿನ ಸುಮಾರು ಅರವತ್ತು ಕಿಲೋಮೀಟರ್ ರೇಡಿಯಸ್ ವ್ಯಾಪ್ತಿಯಲ್ಲಿರುವ ಎಲ್ಲ ಜಿಲ್ಲೆಗಳಿಗೆ ಸಮಗ್ರವಾಗಿ ಮೆಟ್ರೋ ರೈಲು ಯೋಜನೆಯ ನೇರ ಅನುಕೂಲ ಮತ್ತು ಸೌಕರ್ಯ ಲಭಿಸುವುದು ಖಂಡಿತ.
ಮಹಾನಗರಿ ಬೆಂಗಳೂರಿನ ಮೆಟ್ರೋ ರೈಲು ಮಾರ್ಗ ಮತ್ತಷ್ಟು ವಿಸ್ತರಣೆ ಆಗಲಿದೆ. ಈ ದಿಶೆಯಲ್ಲಿ ಸರ್ಕಾರ ಮಾಡಿರುವ ಘೋಷಣೆ, ಬೆಂಗಳೂರಿನ ಸುತ್ತಮುತ್ತಲಿನ ಮೂರ್‍ನಾಲ್ಕು ಜಿಲ್ಲೆಗಳಿಗೆ ಭರವಸೆ ಮೂಡಿಸಿದೆ. ಕಳೆದ ಒಂದೂವರೆ ದಶಕದ ಹಿಂದೆ ಇಲ್ಲಿ ಕಾರ್ಯಗತಗೊಂಡ ಮೆಟ್ರೋ ರೈಲು ಯೋಜನೆಯಿಂದ ಮಹಾನಗರದ ಲಕ್ಷಾಂತರ ಮಂದಿ ಜನತೆಗೆ ಎಲ್ಲ ರೀತಿಯಲ್ಲಿ ಅನುಕೂಲವಾಗಿದೆ. ಉದ್ಯೋಗಿ, ವಿದ್ಯಾರ್ಥಿ , ಕೃಷಿ ಕಾರ್ಮಿಕ ವರ್ಗವಲ್ಲದೆ ರೈತ ಮತ್ತು ಸಾಮಾನ್ಯ ಪ್ರಯಾಣಿಕನಿಗೂ ಮೆಟ್ರೋ ರೈಲು ಬಹುವಿಧವಾಗಿ ಸಹಕಾರಿಯಾಗಿರುವುದು ನಿಜ.
ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಹಾದುಹೋಗುವ ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗದ ಮೆಟ್ರೋ ಮಾರ್ಗವೀಗ ಬೆಂಗಳೂರಿನ ಪೂರ್ವ- ಪಶ್ಚಿಮ ಮತ್ತು ಉತ್ತರ – ದಕ್ಷಿಣದ ದಿಕ್ಕಿನಲ್ಲಿ ಸುಮಾರು ಮೂವತ್ತು ಕಿಲೋ ಮೀಟರ್ ಉದ್ದನೆಯ ಮಾರ್ಗ ಹೊಂದಿದ್ದು ಇದು ಮತ್ತಷ್ಟು ವಿಸ್ತರಣೆಯಾಗುತ್ತಿದೆ. ಪಕ್ಕದ ರಾಮನಗರ, ತುಮಕೂರು ಹಾಗೂ ಚಿಕ್ಕಬಳ್ಳಾಪುರದವರೆಗೆ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದು ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಈಗ ಆರಂಭಗೊಂಡಿರುವುದು ಗಮನಾರ್ಹ.
ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಮೆಟ್ರೊ ಮಾರ್ಗದ ವಿಸ್ತರಣೆಗೆ ನಿಕಟ ಸಂಬಂಧಗಳಿವೆ . ಯಾವುದೇ ಮಹಾನಗರದ ಸರ್ವತೋಮುಖ ಪ್ರಗತಿ ಮತ್ತು ಬೆಳವಣಿಗೆಗೆ ಮೊಟ್ಟ ಮೊದಲಿನ ಮೂಲಭೂತಸೌಕರ್ಯ ಎಂದರೆ ಉತ್ತಮ ಸಾರಿಗೆ ಸಂಪರ್ಕ. ಈ ದಿಶೆಯಲ್ಲಿ ರಸ್ರೆಗ ಮೇಲಿನ ಅತ್ಯದಿಕ ವಾಹನ ಸಾಂದ್ರತೆಯನ್ನು ಪರಿಣಾಮಕಾರಿಯಾಗಿ ತಡೆಯುವ ಸಾಮರ್ಥ್ಯವಿರುವುದು ಮೆಟ್ರೋ ರೈಲು ಯೋಜನೆಗೆ ಮಾತ್ರ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಚೆಗೂ ಮೆಟ್ರೋ ಯೋಜನೆ ವಿಸ್ತರಣೆಗೊಳ್ಳುವುದರಿಂದ ಶೈಕ್ಷಣಿಕ ಮತ್ತು ಕೃಷಿ ಪ್ರಧಾನವಾದ ಚಿಕ್ಕಬಳ್ಳಾಪುರಕ್ಕೆ ಉತ್ತಮ ಸಾರಿಗೆ ಸಂಪಕ ದೊರೆತಂತಾಗುತ್ತದೆ. ಬೆಂಗಳೂರಿನ ಜೊತೆ ಈ ಜಿಲ್ಲೆ ಹೊಂದಿರುವ ಎಲ್ಲ ಬಗೆಯ ನಂಟು ಮತ್ತು ದೈನಂದಿನ ಚಟುವಟಿಕೆಗಳಿಗೆ ಉದ್ದೇಶಿತ ಯೋಜನೆ ಪೂರಕ. ಹಾಗೆಯೇ ಬೆಂಗಳೂರಿಗೆ ೬೦ ಕಿಲೋಮೀಟರ್ ದೂರದಲ್ಲಿರುವ ತುಮಕೂರು ನಗರಕ್ಕೆ ಮೆಟ್ರೋ ಸಂಪರ್ಕ ವಿಸ್ತರಣೆಯಾಗುವುದರಿಂದ ಬೆಂಗಳೂರು ಮತ್ತು ತುಮಕೂರಿನ ನಡುವಣದ ವಾಣಿಜ್ಯ ಮತ್ತಿತರ ಚಟುವಟಿಕೆ ಗಳು ದ್ವಿಗುಣವಾಗುವುದರಲ್ಲಿ ಸಂದೇಹವಿಲ್ಲ.
ಮುಂದಿನ ದಿನಗಳಲ್ಲಿ ರಾಮನಗರದ ರೇಷ್ಮೆ ಮತ್ತದರ ಉದ್ಯಮದ ಚಟುವಟಿಕೆಗಳಿಗೆ ಮೆಟ್ರೋ ವರದಾಯಕವಾಗಲಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರವು ಈಗ ರೂಪಿಸಿರುವ ಎಲ್ಲ ಮೆಟ್ರೋ ಯೋಜನೆಗಳು ಸಕಾಲದಲ್ಲಿ ಮತ್ತು ಸಮಯೋಚಿತವಾಗಿ ಕಾರ್ಯಾನುಷ್ಠಾನಗೊಂಡಲ್ಲಿ ಬೆಂಗಳೂರಿನ ಸುಮಾರು ಅರವತ್ತು ಕಿಲೋಮೀಟರ್ ರೇಡಿಯಸ್ ವ್ಯಾಪ್ತಿಯಲ್ಲಿರುವ ಎಲ್ಲ ಜಿಲ್ಲೆಗಳಿಗೆ ಸಮಗ್ರವಾಗಿ ಮೆಟ್ರೋ ರೈಲು ಯೋಜನೆಯ ನೇರ ಅನುಕೂಲ ಮತ್ತು ಸೌಕರ್ಯ ಲಭಿಸುವುದು ಖಂಡಿತ. ದೇಶದ ಮಹಾನಗರಗಳಾದ ಮುಂಬಯಿ, ಚೆನ್ನೈ ದಿಲ್ಲಿಗೆ ಇಲ್ಲದಂತಹ ಅಸಾಧಾರಣ ಭೌಗೋಳಿಕ ವರದಾನವು ನಾಡಫ್ರಭು ಕೆಂಪೇಗೌಡ ನಿರ್ಮಿಸಿರುವ ಬೆಂಗಳೂರು ನಗರಕ್ಕಿದೆ. ಈ ದಿಶೆಯಲ್ಲಿ ರೇಷ್ಮೆ ನಗರಿ ಮತ್ತು ಸೇವಂತಿಗೆ, ದ್ರಾಕ್ಷಿ ಮತ್ತು ಆಲೂಗಡ್ಡೆ ತವರುನೆಲ ಮತ್ತು ಕಲ್ಪವೃಕ್ಷ ನಾಡು, ಸರ್ಕಾರದ ಉದ್ದೇಶಿತ ಮೆಟ್ರೊ ರೈಲು ಯೋಜನೆಯಿಂದ ನಿಕಟ ಸಂಬಂಧ ಹೊಂದಲು ಸಹಕಾರಿ.


