2006ರ ಹೊಸ ವರ್ಷಾಚರಣೆ ಸಂಭ್ರಮದ ನಡುವೆ ನಮ್ಮ ಮೆಟ್ರೋ ಒಂದೇ ದಿನದಲ್ಲಿ 3 ಕೋಟಿಗೂ ಅಧಿಕ ಆದಾಯ ಗಳಿಸಿ ದಾಖಲೆ ಬರೆದಿದೆ.
ಡಿಸೆಂಬರ್ 31ರಂದು ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ ಸಾರ್ವಜನಿಕರ ಅನುಕೂಲಕ್ಕಾಗಿ ಮಧ್ಯರಾತ್ರಿ 3 ಗಂಟೆಯವರೆಗೂ ರೈಲು ಸಂಚಾರ ವಿಸ್ತರಿಸಿತ್ತು. ಅಲ್ಲದೇ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಿತ್ತು.
ಮೆಟ್ರೋ ರೈಲು ಸೇವೆ ವಿಸ್ತರಣೆಯ ಲಾಭ ಪಡೆದ ಪ್ರಯಾಣಿಕರು ದಾಖಲೆ ಪ್ರಮಾಣದಲ್ಲಿ ಪ್ರಯಾಣಿಸಿದ್ದು, ಮೆಟ್ರೋ ರೈಲಿನಲ್ಲಿ ಒಂದೇ ದಿನ ಬರೋಬ್ಬರಿ 8 ಲಕ್ಷ 93 ಸಾವಿರ 903 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.
ಬಿಎಂಆರ್ ಸಿಎಲ್ ಸಂಸ್ಥೆಯ ಪಿಎಂಆರ್ ಯಶವಂತ್ ಚೌಹಾಣ್ ಗುರುವಾರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಮೆಟ್ರೋ ರೈಲು ಸೇವೆ ವಿಸ್ತರಣೆಯ ಪ್ರಯೋಜನವನ್ನು ಸಾರ್ವಜನಿಕರು ಪಡೆದಿದ್ದಾರೆ. ಯೆಲ್ಲೋ, ಪರ್ಪಲ್ ಮತ್ತು ಗ್ರೀನ್ ಲೈನ್ ಸೇರಿ ಎಲ್ಲ ಮಾರ್ಗಗಳಲ್ಲಿ ಪ್ರಯಾಣಿಕರ ದಾಖಲೆ ಸಂಖ್ಯೆ ಕಂಡುಬಂದಿದೆ.
ಡಿಸೆಂಬರ್ 31ರಂದು ಒಂದೇ ದಿನ ಬರೋಬ್ಬರಿ 8 ಲಕ್ಷ 93 ಸಾವಿರ 903 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದುಇದರಿಂದ ನಮ್ಮ ಮೆಟ್ರೋಗೆ ರೂ. 3 ಕೋಟಿ 08 ಲಕ್ಷ ಆದಾಯ ಬಂದಿದೆ.
ಡಿಸೆಂಬರ್ 31ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ 9.93 ಲಕ್ಷ ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರೆ, ರಾತ್ರಿ 11 ಗಂಟೆ ನಂತರ 40,774 ಮಂದಿ ಪ್ರಯಾಣಿಸಿದ್ದಾರೆ.
ನಮ್ಮ ಮೆಟ್ರೋಗೆ ಪ್ರತಿದಿನ ಸರಾಸರಿ 2.7 ಕೋಟಿ ರೂ. ಆದಾಯವಾಗುತ್ತಿದೆ. ಆದರೆ ಕ್ರಿಸ್ ಮಸ್ ನಂತರ ರಜೆಯ ಕಾರಣ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಪ್ರತಿದಿನ 7 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ 6 ಲಕ್ಷಕ್ಕೆ ಇಳಿಕೆಯಾಗಿತ್ತು. ಆದರೆ ನಿನ್ನೆ ಒಂದೇ ದಿನ 3 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ ಎಂದು ಅವರು ಹೇಳಿದರು.


