Tuesday, November 11, 2025
Menu

ಟೀಕೆ ಮಾಡುತ್ತಿರುವವರಿಂದಲೇ ನಮ್ಮ ಗ್ಯಾರಂಟಿ ಯೋಜನೆಗಳ ನಕಲು: ಡಿಕೆ ಶಿವಕುಮಾರ್

“ನಾವು ಕರ್ನಾಟಕದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿಯವರು ಟೀಕೆ ಮಾಡುತ್ತಿದ್ದರು.‌ ಈಗ ಹರಿಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮಕ್ಕೆ ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು.

“ಕರ್ನಾಟಕದ ಕಾಂಗ್ರೆಸ್ ‌ಪಕ್ಷದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ.‌ ಬೇರೆ ಪಕ್ಷದವರು ಈಗ ಜನರ ಕಲ್ಯಾಣದ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಕರುನಾಡಿನ ಜನರ ಸೇವೆಯನ್ನು ಉತ್ತಮ ಸರ್ಕಾರ ಮುನ್ನಡೆಸುತ್ತಿದೆ. ಭವಿಷ್ಯದಲ್ಲಿ ಇದಕ್ಕಿಂತ ಉತ್ತಮ ಆಡಳಿತ ನೀಡುತ್ತೇವೆ. 2028 ಕ್ಕೆ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ‌ಅಧಿಕಾರಕ್ಕೆ ಬಂದು ನಿಮ್ಮ ಸೇವೆ ಮಾಡಲಿದೆ” ಎಂದರು.

“ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಭೂ ಒಡೆತನವನ್ನು ಆರನೇ ಗ್ಯಾರಂಟಿಯಾಗಿ, ಏಳನೇ ಗ್ಯಾರಂಟಿಯಾಗಿ ರೈತರಿಗೆ ನೀರನ್ನು ನೀಡುತ್ತಿದ್ದೇವೆ” ಎಂದು ಹೇಳಿದರು.

“ಗಂಗಾ ಸ್ನಾನ ತುಂಗಾ ಪಾನ ಎನ್ನುವ ಮಾತಿದೆ. ಅಂದರೆ ತುಂಗಾನದಿ ನೀರು ಕುಡಿಯುವುದಕ್ಕೆ ಅಷ್ಟು ಪವಿತ್ರವಾದುದು. ಅಂತಹ ನೀರನ್ನು ಜನರ ಉಪಯೋಗಕ್ಕಾಗಿ ಕೆರೆಗಳಿಗೆ ಹರಿಸುತ್ತಿದ್ದೇವೆ” ಎಂದು ಹೇಳಿದರು.

“ಕೆರೆಗಳಿಗೆ ನೀರು ಹರಿಸಲು 800 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಈಗಾಗಲೇ ವೆಚ್ಚ ಮಾಡಲಾಗಿದೆ. ಎಲ್ಲಾ ಕೆರೆಗಳನ್ನು ತುಂಬಿಸುವ ಸಲುವಾಗಿ ವಾರ್ಷಿಕ ವಿದ್ಯುತ್ ವೆಚ್ಚವೇ 80 ಲಕ್ಷ ರೂಪಾಯಿ ತಲುಪುತ್ತದೆ. ಸರ್ಕಾರವು ಒಂದೆರಡು ವರ್ಷ ಈ ವೆಚ್ಚವನ್ನು ಭರಿಸಬಹುದು. ಆದ ಕಾರಣಕ್ಕೆ ಎಲ್ಲಾ ಕೆರೆಗಳನ್ನು ಮೀನುಗಾರಿಕೆ ನಡೆಸಲು ಹರಾಜು ಹಾಕಬೇಕು. ಈ ಮೂಲಕ ವೆಚ್ಚವನ್ನು ಸರಿದೂಗಿಸಬೇಕು ಎಂದು ಹೇಳಿದ್ದೇನೆ. ಇದರಿಂದ ಎಲ್ಲಾ ರೈತರಿಗೆ ಅನುಕೂಲವಾಗಲಿದೆ” ಎಂದರು.

“ಎನ್.ಟಿ.ಬೊಮ್ಮಣ್ಣ ಹಾಗೂ ನಾನು ಬಂಗಾರಪ್ಪನವರ ಶಿಷ್ಯರು. ವಿ.ಎಸ್.ಉಗ್ರಪ್ಪ ಅವರು ಸಂಸದ ಸ್ಥಾನಕ್ಕೆ ನಿಂತಿದ್ದಾಗ ಬೊಮ್ಮಣ್ಣ ಅವರು 74 ಕೆರೆಗಳನ್ನು ತುಂಬಿಸುವಂತೆ ಮನವಿ ಮಾಡಿದ್ದರು. ನನ್ನ ಸ್ನೇಹಿತರಾದ ನಿಮ್ಮ ಕೆಲಸವನ್ನು ಖಂಡಿತವಾಗಿ ನಾನು ಮಾಡಿಕೊಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅಂದು ಕೊಟ್ಟ ಮಾತು ಇಂದು ಈಡೇರಿದೆ. ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸಿ 1.76 ಲಕ್ಷ ಜನರ ಬದುಕಿಗೆ ನೆರವಾಗಿದ್ದೇವೆ ಎಂದರು.

“ತುಂಗಭದ್ರಾ ಅಣೆಕಟ್ಟುವಿನ ಎಲ್ಲಾ ಕ್ರೆಸ್ಟ್ ಗೇಟ್ ಗಳನ್ನ ಬದಲಾವಣೆ ಮಾಡಲಾಗುತ್ತಿದೆ‌. ಈಗಾಗಲೇ ಕೆಲಸವೂ ನಡೆಯುತ್ತಿದೆ. ಎರಡನೇ ಬೆಳೆ ವಿಚಾರವಾಗಿ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ನಾವೇನೂ ರೈತರಿಗೆ ನೀರು ಕೊಡಬಾರದು ಎನ್ನುವ ಧೋರಣೆ ಹೊಂದಿಲ್ಲ. ಆದರೆ ಅಣೆಕಟ್ಟು ಮುಖ್ಯವೋ? ಬೆಳೆ ಮುಖ್ಯವೋ ಎಂಬುದನ್ನು ರೈತರು ಆಲೋಚಿಸಬೇಕಾಗಿ ಮನವಿ ಮಾಡುತ್ತೇನೆ. ಯಾರ ಒತ್ತಡಕ್ಕೂ ರೈತರು ಮಣಿಯಬಾರದು ಎಂದು ಮನವಿ ಮಾಡುತ್ತೇವೆ. ಕೇಂದ್ರ ಸರ್ಕಾರ ರಚನೆ ಮಾಡಿರುವ ತುಂಗಭದ್ರಾ ಸಮಿತಿಯು ನೀರು ನೀಡುವ ಬಗ್ಗೆ ತೀರ್ಮಾನ ಮಾಡುತ್ತದೆ” ಎಂದು ಹೇಳಿದರು.

“ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದುಕೊಂಡು ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಡೀ ರಾಜ್ಯದಾದ್ಯಂತ ನೂರು ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡುವ ಉದ್ದೇಶಕ್ಕೆ ಇಡೀ ರಾಜ್ಯದಾದ್ಯಂತ ಹಲವಾರು ಶಾಸಕರು, ಸಚಿವರು ನಿವೇಶನ ಒದಗಿಸಿ ಸಹಕಾರ ನೀಡಿದ್ದಾರೆ. ಒಂದಷ್ಟು ಶಾಸಕರು, ಮಂತ್ರಿಗಳು ಸಹಕಾರ ನೀಡಿಲ್ಲ. ಇದರ ಬಗ್ಗೆ ಎಐಸಿಸಿ ಅವರು ವರದಿ ಕೇಳಿದ್ದು ಶೀಘ್ರದಲ್ಲೇ ಈ ವರದಿಯನ್ನು ದೆಹಲಿಗೆ ಕಳುಹಿಸಲಾಗುವುದು” ಎಂದರು.

“ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಉಚಿತವಾಗಿ ಬಳ್ಳಾರಿ ನಗರದಲ್ಲಿ ನಿವೇಶನವನ್ನು ಶಾಸಕರು ನೀಡಿದ್ದಾರೆ.‌ ನಾಗೇಂದ್ರ ಅವರು, ಹರಪನಹಳ್ಳಿ ಶಾಸಕರಾದ ಲತಾ ಅವರು,‌ ಪರಮೇಶ್ವರ ನಾಯ್ಕ್ ಅವರು, ಸಿರಾಜ್ ಶೇಖ್ ಅವರೂ ತಮ್ಮ ಕ್ಷೇತ್ರದಲ್ಲಿ ನಿವೇಶನ ನೀಡಿದ್ದಾರೆ. ಬಿ.ಎಂ.ನಾಗರಾಜು ಅವರು ತಮ್ಮ ಸ್ವಂತ ಜಾಗವನ್ನು ಪಕ್ಷಕ್ಕಾಗಿ ದಾನ ಮಾಡಿದ್ದಾರೆ. ಈ ಜಿಲ್ಲೆಯ ಎಲ್ಲಾ ಶಾಸಕರು ಸಹಕಾರ ನೀಡಿದ್ದಾರೆ” ಎಂದರು.

“ಮುಂದಿನ ದಿನಗಳಲ್ಲಿ ಕಚೇರಿಗಳಿಗೆ ಅಡಿಪಾಯ ಹಾಕಲಾಗುವುದು. ಈ ಕೆಲಸವನ್ನು ಶಾಸಕರು,‌ ಸಚಿವರು ಮುಂದುವರೆಸಿಕೊಂಡು ಹೋಗಬೇಕು. ಎಲ್ಲರೂ ತನು, ಮನ, ಧನವನ್ನು ನೀಡಬೇಕು.‌ ಒಂದು ರೂಪಾಯಿಂದ ಹಿಡಿದು ಒಂದು ಕೋಟಿವರೆಗೂ ಎಷ್ಟು ಬೇಕಾದರೂ ದೇಣಿಗೆ ನೀಡಿ ಪಕ್ಷದ ಕಚೇರಿ ಕಟ್ಟುವ ಕೆಲಸಕ್ಕೆ ಸಹಕಾರ ನೀಡಿ” ಎಂದು ಮನವಿ ಮಾಡಿದರು.

“ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ನೀಡಿದ್ದೇವೆ. ಇದಲ್ಲದೆ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು 20 ಸಾವಿರ ಕೋಟಿ, ಪಿಂಚಣಿಗಳಿಗೆ 9 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ‌. ಬಡವರ ಕಲ್ಯಾಣಕ್ಕಾಗಿ ಇಷ್ಟೊಂದು ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಕೆಲಸ ಮಾಡಲಾಗುತ್ತಿದೆ. ಸಣ್ಣ ನೀರಾವರಿ ಸಚಿವರಾದ ಬೋಸರಾಜು ಅವರು ತಮ್ಮ ಇಲಾಖೆಯಲ್ಲಿ ಕ್ರಾಂತಿ ಮಾಡುತ್ತಿದ್ದಾರೆ. ಬೆಂಗಳೂರಿನ ಕೊಳಚೆ ನೀರನ್ನು ಶುದ್ದೀಕರಣ ಮಾಡಿ ಕೋಲಾರ ಸೇರಿದಂತೆ ಸುತ್ತಲಿನ ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಿದೆ ಎಂದು ತಿಳಿಸಿದರು.

ರೇಷ್ಮೆ ಮಾರುಕಟ್ಟೆ ತೆರೆಯಲು ಚಿಂತನೆ

“ಇಲ್ಲಿಗೆ ಬರುವುದಕ್ಕೆ ಮುಂಚಿತವಾಗಿ ಮುಖ್ಯಮಂತ್ರಿಗಳ ಜೊತೆ ಈ ಕೂಡ್ಲಗಿ ಕ್ಷೇತ್ರದಲ್ಲಿನ ರೇಷ್ಮೆ ಬೆಳೆಗಾರರ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ಸುಮಾರು 4 ಸಾವಿರ ರೇಷ್ಮೆ ಬೆಳೆಗಾರರು ಇದ್ದಾರೆ ಎಂದು ತಿಳಿಯಿತು. ರಾಮನಗರ ಮಾರುಕಟ್ಟೆಯಲ್ಲಿ ಇಲ್ಲಿನ ರೇಷ್ಮೆ ಗೂಡಿಗೆ ಹೆಚ್ಚು ಬೆಲೆಯಿದೆ ಎಂದು ತಿಳಿಯಿತು. ಚೀನಾ ರೇಷ್ಮೆ ಬರುವುದು ಕಡಿಮೆಯಾದ ಮೇಲೆ ನಮ್ಮ ಬೆಲೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ಮಾರುಕಟ್ಟೆ ತೆರೆಯುವ ಬಗ್ಗೆ ಚಿಂತಿಸಲಾಗುವುದು” ಎಂದು ಹೇಳಿದರು.

“ಒಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಜವಾಬ್ದಾರಿ ಕೇವಲ ರಾಜಕಾರಣಿ ಮೇಲೆ ಮಾತ್ರ ಇರುವುದಿಲ್ಲ. ಆ ಕ್ಷೇತ್ರದ ಜನರ ಸಹಕಾರವೂ ಬೇಕಾಗುತ್ತದೆ. ಎ.ಟಿ.ಶ್ರೀನಿವಾಸ್ ಅವರು ಜನರ ಆಶೋತ್ತರಗಳನ್ನು ಅರಿತು ಕೆಲಸ ಮಾಡುತ್ತಿದ್ದಾರೆ. ಸಂಸದರನ್ನಾಗಿ ತುಕಾರಾಂ ಅವರನ್ನು ಗೆಲ್ಲಿಸಿ ನಮ್ಮ ಜವಾಬ್ದಾರಿಯನ್ನು ಹೆಚ್ಚು ಮಾಡಿದ್ದೀರಿ” ಎಂದರು.

Related Posts

Leave a Reply

Your email address will not be published. Required fields are marked *