Menu

ಚಾಮರಾಜನಗರಕ್ಕೆ ಅಂಟಿರುವ ಹಿಂದುಳಿದ ಜಿಲ್ಲೆ ಹಣೆಪಟ್ಟಿ ನಿರ್ಮೂಲನೆಗೆ ನಮ್ಮ ಸರ್ಕಾರ ಬದ್ಧ: ಡಿಸಿಎಂ ಡಿಕೆ ಶಿವಕುಮಾರ್

dk shivakumar

ಚಾಮರಾಜನಗರ: “ನಂಜುಂಡಪ್ಪ ವರದಿಯಲ್ಲಿ ಜಾಮರಾಜನಗರ ಜಿಲ್ಲೆಗೆ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಸಿಕ್ಕಿತ್ತು. ಈ ಹಣೆಪಟ್ಟಿಯನ್ನು ತೆಗೆಯಲು ನಮ್ಮ ಸರ್ಕಾರ ಬದ್ಧವಾಗಿದ್ದು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಸರ್ಕಾರ ಕೈಗೊಂಡಿರುವ ತೀರ್ಮಾನ, ಯೋಜನೆಗಳು ಇದಕ್ಕೆ ನೆರವಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ತಮ್ಮ ಇಲಾಖೆ ವತಿಯಿಂದ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

“ಸಾಲಿಗ್ರಾಮ ಮತ್ತು ತಗಡೂರಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 82 ಕೋಟಿ ರೂ. ನೀಡಲಾಗಿದೆ. ಕೊಳ್ಳೆಗಾಲದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ 85 ಕೋಟಿ ನೀಡಲಾಗಿದೆ. ಹನೂರು ತಾಲೂಕಿನಲ್ಲಿ ಪ್ರಜಾಸೌಧಕ್ಕೆ 8.60 ಕೋಟಿ ರೂ. ನೀಡಲಾಗಿದೆ. ಬುಡಕಟ್ಟು ಜನರಿಗೆ ವಿದ್ಯುತ್ ಒದಗಿಸಿಕೊಡಲು 50 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಆಮೆಕೆರೆ ಅರಣ್ಯ ಪ್ರದೇಶದಲ್ಲಿದ್ದ ಸುಮಾರು 100 ರೈತರಿಗೆ 9.75 ಕೋಟಿ ನೀಡಿ ಅವರನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಮೈಸೂರಿನಲ್ಲಿ ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣಕ್ಕೆ 70 ಕೋಟಿ ನೀಡಲಾಗಿದೆ. ಮಂಡ್ಯದ ಮಳವಳ್ಳಿಯಲ್ಲಿ ಕುಂತೂರು ಹಾಗೂ ಇತರೆ ಕೆರೆಗಳನ್ನು ತುಂಬಿಸಲು ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 28 ಕೋಟಿ ನೀಡಲಾಗಿದೆ” ಎಂದು ಹೇಳಿದರು.

“ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಹಾಗೂ ಕಡೂರು ತಾಲೂಕಿನ 25 ಕೆರೆಗಳನ್ನು ತುಂಬಿಸಲು 98 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಪಾಂಡವಪುರ ತಾಲೂಕಿನಲ್ಲಿ ಬಳಕಟ್ಟ ಏತ ನೀರಾವರಿ ಯೋಜನೆಗೆ 29 ಕೋಟಿ ನೀಡಲಾಗಿದೆ. ವರುಣ ಕ್ಷೇತ್ರದಲ್ಲಿ 15 ಕೋಟಿ ವೆಚ್ಚದಲ್ಲಿ ಅಂತರ್ಜಲ ಮರುಪೂರಣ ಯೋಜನೆಗಾಗಿ ಚೆಕ್ ಡ್ಯಾಂ ಮಾಡಲು ಯೋಜನೆ ರೂಪಿಸಲಾಗಿದೆ. ವರುಣಾ ಕ್ಷೇತ್ರದ ಕೆಲವು ಗ್ರಾಮಗಳ ಏತ ನೀರಾವರಿಗೆ 41 ಕೋಟಿ ವೆಚ್ಚಕ್ಕೆ ಆಡಳಿತ ಅನುಮೋದನೆ ನೀಡಲಾಗಿದೆ. ಹೆಗ್ಗಡದೇವನ ಕೋಟೆಯಲ್ಲಿ 25 ಕೋಟಿ ಮೊತ್ತದ ಪಿಕ್ ಅಪ್ ಕಾಲುವೆ, ಪಿರಿಯಾಪಟ್ಟಣ ತಾಲೂಕಿನಲ್ಲಿ 12 ಕೋಟಿ ಮೊತ್ತದ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ” ಎಂದರು.

“ಕೆ.ಆರ್ ನಗರ ಹಾಗೂ ಸಾಲಿಗ್ರಾಮದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಏತ ನೀರಾವರಿಗೆ 50 ಕೋಟಿ ನೀಡಲಾಗಿದೆ. ಶ್ರೀರಂಗಪಟ್ಟಣದ ಅರಕೆರೆ ಗ್ರಾಮದ ಬಳಿ ಕಾವೇರಿ ನದಿಯಿಂದ 12 ಕೆರೆ ತುಂಬಿಸಲು 35 ಕೋಟಿ ಅನುದಾನ ನೀಡಲಾಗಿದೆ. ಮದ್ದೂರಿನಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಸೇತುವೆ ಹಾಗೂ ಬ್ಯಾರೇಜ್ ಡ್ಯಾಂ ನಿರ್ಮಾಣಕ್ಕೆ 30 ಕೋಟಿ, ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಕೃಷಿ ಸೇತುವೆ ಹಾಗೂ ಚೆಕ್ ಡ್ಯಾಂ ನಿರ್ಮಾಣಕ್ಕೆ 25 ಕೋಟಿ ಮಂಜೂರು ಮಾಡಲಾಗಿದೆ” ಎಂದು ಹೇಳಿದರು.

“ಚಾಮರಾಜನಗರ ಹೊಂಗನೂರು ಕೆರೆಗೆ 14 ಕೋಟಿ, ಅಮಚವಾಡಿ ಕೆರೆಗೆ 11 ಕೋಟಿ, ಮಾಲಂಗಿ ಗ್ರಾಮದ ಬಳಿ ಕಾವೇರಿ ಮೂರನೇ ಹಂತದ ಕುಡಿಯುವ ನೀರಿನ ಯೋಜನೆಗೆ 150 ಕೋಟಿ, ದಳವಾಯಿ ಕೆರೆಯಲ್ಲಿ 3 ಎಂಎಲ್ ಡಿ ಕುಡಿಯುವ ನೀರಿನ ಘಟಕಕ್ಕೆ 18 ಕೋಟಿ ನೀಡಲಾಗಿದೆ. ಬೆಂಗಳೂರಿನಂತೆ ಮೈಸೂರು ನಗರದಲ್ಲಿ 391 ಕೋಟಿ ಮೊತ್ತದ ಯೋಜನೆಯಲ್ಲಿ ರಸ್ತೆಗಳ ವೈಟ್ ಟ್ಯಾಪಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ. ಕೊಳ್ಳೆಗಾಲದಲ್ಲಿ ಮಡಿಗುಂಡಿ ಬಳಿ ಸುವರ್ಣಾವತಿ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣಕ್ಕೆ 15 ಕೋಟಿ ಮಾಡಲಾಗಿದೆ. ರೇಷ್ಮೇ ಇಲಾಖೆಯಿಂದ ಪರಿಶಿಷ್ಟರಿಗೆ ಸಹಾಯ ಮಾಡಲು 15 ಕೋಟಿ ನೀಡಲಾಗಿದೆ” ಎಂದರು.

ಕಾವೇರಿ ಆರತಿಗೆ 92 ಕೋಟಿ ಮೀಸಲು

“ಹಾರಂಗಿ ಜಲಾಶಯಕ್ಕೆ ಬರುವ ಪಿರಿಯಾಪಟ್ಟಣ ಏತ ನೀರಾವರಿ ಕಾಲುವೆಗೆ 198 ಕೋಟಿ ಮೊತ್ತ ಮಂಜೂರು ಮಾಡಲಾಗಿದೆ. ಚಿಕ್ಕನಂದಿ ಏತ ನೀರಾವರಿ ಯೋಜನೆಗೆ 103 ಕೋಟಿ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಚಾಮರಾಜನಗರ ಬಲದಂಡೆ ನಾಲೆಗೆ 15 ಕೋಟಿ ನೀಡಲಾಗಿದೆ. ರಾಮಸಮುದ್ರ ನಾಲೆಗೆ 43 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಬಿದರಹಳ್ಳಿ ಪಿಕ್ ಅಪ್ ನಾಲೆ 42 ಕೋಟಿ, ಹಾರೋಹಳ್ಳಿ ಕೆಳಮಟ್ಟದ ನಾಲೆ ಅಭಿವೃದ್ಧಿಗೆ 42 ಕೋಟಿ, ಕಬಿನಿ ಬಲದಂಡೆ ನಾಲೆ ಯೋಜನೆಗೆ 24 ಕೋಟಿ, ಸುವರ್ಣಾವತಿ ಜಲಾಶಯಕ್ಕೆ 24 ಕೋಟಿ, ಸುವರ್ಣಾವತಿ ಭಾಗದ ಕೆರೆ ತುಂಬಿಸಲು 70 ಕೋಟಿ, ಗುಂಡಕಲ್ ವ್ಯಾಪ್ತಿಯ ಸರಣಿ ಕೆರೆಗಳಿಗೆ 50 ಕೋಟಿ, ಟಿ.ನರಸಿಪುರ ಹಾಗೂ ಮಳವಳ್ಳಿ ತಾಲೂಕಿಗೆ ಬರುವ ನಾಲೆಗಳಿಗೆ 91 ಕೋಟಿ, ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಮಾಡಲು 92 ಕೋಟಿ ಮೀಸಲಿಡಲು ಅನುಮೋದನೆ ನೀಡಲಾಗಿದೆ” ಎಂದು ತಿಳಿಸಿದರು.

“ಚಾಮರಾಜನಗರ ಆಕ್ಸಿಜನ್ ದುರಂತ ಕುಟುಂಬ ಸದಸ್ಯರಿಗೆ ಇನ್ನು ಕೆಲಸ ಸಿಕ್ಕಿಲ್ಲ ಎಂದು ಕೇಳಿದಾಗ, “ಈ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ನಾವು ಮಾತು ಕೊಟ್ಟಿದ್ದೆವು. ಕೆಲವರಿಗೆ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಕೆಲಸ ನೀಡಲಾಗಿದೆ. ಇನ್ನು ಕೆಲವರಿಗೆ ನೀಡಬೇಕಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕಿದ್ದು, ಪ್ರತಿಯೊಬ್ಬರ ವಿದ್ಯಾರ್ಹತೆ ಹಾಗೂ ಇತರೆ ವಿಚಾರಗಳ ಪರಿಶೀಲನೆ ಮಾಡುತ್ತಿದ್ದೇವೆ. ನಮಗೆ ಇದು ಆದ್ಯತೆಯ ವಿಚಾರ. ಇಂದು ನ್ಯಾ.ಕುನ್ಹಾ ಅವರ ಎರಡನೇ ವರದಿಯನ್ನು ಸ್ವೀಕರಿಸಲಾಗಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಇದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಈ ವಿಚಾರವೂ ಅದರೊಳಗೆ ಬರುತ್ತದೆ. ವೈದ್ಯಕೀಯ ಶಿಕ್ಷಣ ಸಚಿವರಿಗೆ ಹೇಳಿ ಇಲ್ಲಿ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜಿನಲ್ಲಿ ಸ್ಥಳೀಯ ಮೆಡಿಕಲ್ ಕಾಲೇಜುಗಳಲ್ಲಿ ಹೇಗೆ ಉದ್ಯೋಗ ನೀಡಬಹುದು ಎಂದು ಚರ್ಚಿಸಿ ತೀರ್ಮಾನ ಮಾಡಲಾಗುವುದು” ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *