ಶೂದ್ರ ಶ್ರಮಿಕ ವರ್ಗಗಳಿಗೆ ಆರ್ಥಿಕ ಚೈತನ್ಯ ಕೊಡಲು ಅಂದು ಭಾಗ್ಯಗಳು-ಇಂದು ಗ್ಯಾರಂಟಿಗಳು ವರದನವಾಗಿವೆ. ನಮ್ಮ ಸರ್ಕಾರ ಜಾತಿ ನೋಡಲ್ಲ. ಎಲ್ಲಾ ಜಾತಿಯವರ ಅಭಿವೃದ್ಧಿಯಷ್ಟೆ ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ಜಿಲ್ಲಾಡಳಿತ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, “ಉಪ್ಪಾರ ಸಮುದಾಯ ಭವನದ” ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈ ನೆಲದ ದಾರ್ಶನಿಕರು, ಮಹಾನುಭಾವರ ಮನುಕುಲದ ಕೊಡುಗೆ ಗಮನಿಸಿ ಅವರೆಲ್ಲರ ಜಯಂತಿಯನ್ನು ಸರ್ಕಾರವೇ ಆಚರಿಸುತ್ತಿದೆ. ಇವರೆಲ್ಲರೂ ಜಾತ್ಯತೀತ ಮನೋಭಾವದಿಂದ ನೀಡಿದ ಮೌಲ್ಯಗಳ ಆಧಾರದಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತದೆ ಎಂದರು.
ಶೂದ್ರರಲ್ಲಿ ಉಪ್ಪಾರ ಸಮುದಾಯ ಅತೀ ಹಿಂದುಳಿದ ಸಮುದಾಯವಾಗಿದೆ. ಅಂಬೇಡ್ಕರ್ ಅವರು ನೀಡಿರುವ “ಶಿಕ್ಷಣ-ಸಂಘಟನೆ-ಹೋರಾಟ ಎನ್ನುವ ಮಂತ್ರವನ್ನು ನಾವು ಪಾಲಿಸುವ ಮೂಲಕ ಉಪ್ಪಾರ ಸಮುದಾಯ ಆರ್ಥಿಕ ಸಬಲರಾಗಬೇಕು. ಈ ಉದ್ದೇಶದಿಂದಲೇ ನಾನು ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪಿಸಿದೆವು ಎಂದು ವಿವರಿಸಿದರು.
ಸರ್ವ ಶ್ರಮಿಕ ವರ್ಗವನ್ನು ಗಮನದಲ್ಲಿ ಇಟ್ಟುಕೊಂಡು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದರ ಪರಿಣಾಮ ಪ್ರತೀ ಕುಟುಂಬಕ್ಕೆ 5 ರಿಂದ 6 ಸಾವಿರ ರೂಪಾಯಿಯ ನೆರವು ಪ್ರತೀ ತಿಂಗಳು ದೊರೆಯುತ್ತಿದೆ. ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿರುವುದಲ್ಲದೆ ರಾಜ್ಯದ ಆರ್ಥಿಕ ಚಟುವಟಿಕೆಗೆ ವೇಗ ಒದಗಿದೆ. ಆರ್ಥಿಕ ಅಸಮಾನತೆ ಭಾಷಣ ಮಾಡಿದರೆ ಹೋಗಲ್ಲ. ಕಾರ್ಯಕ್ರಮ ಜಾರಿಗೆ ತರುವುದು ಮುಖ್ಯವೆಂದರು.
ರಾಜ್ಯದಲ್ಲಿ ದಲಿತ ಹೋರಾಟ ಜೋರಾಗಿದ್ದ ಸಂದರ್ಭದಲ್ಲಿ, ” ಹೆಂಡ ಬೇಡ-ಶಾಲೆ ಬೇಕು” ಎನ್ನುವ ಘೋಷಣೆ ಕೂಗಿದ್ದರು. ಈ ಘೋಷಣೆಯ ಪ್ರೇರಣೆಯಿಂದ ನಾನು ಮೊರಾರ್ಜಿ ವಸತಿ ಶಾಲೆಗಳನ್ನು ಆರಂಭಿಸಿದೆ. ಈಗ ಹೋಬಳಿಗೊಂದು ವಸತಿ ಶಾಲೆಗಳಿವೆ. ನಾನು ಓದುವಾಗ ಹೋಟೆಲಿಂದ ಸಾಂಬಾರು ತಂದು, ರೂಮಲ್ಲಿ ಅನ್ನ ಮಾಡಿಕೊಂಡು ತಿನ್ನುತ್ತಿದ್ದೆವು. ಈ ಕಷ್ಟ ನನಗೆ ಗೊತ್ತಿದೆ ಎಂದರು.
ಉಪ್ಪಾರ ಸಮುದಾಯದ ಕುಲಶಾಸ್ತೀಯ ಅಧ್ಯಯನದ ಆಧಾರದಲ್ಲಿ ಮುಂದಿನ ಕ್ರಮ ವಹಿಸಲಾಗುವುದು. ಉಪ್ಪಾರ ಭವನಗಳಿಗೆ ಹಣ ಒದಗಿಸಲಾಗುವುದು. ನಿಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಿತರನ್ನಾಗಿ ಮಾಡುತ್ತೇವೆ ಎನ್ನುವ ಶಪಥ ಮಾಡಬೇಕು ಎಂದು ಒತ್ತಾಯಿಸಿದರು. ನಾವು ನಿಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದೇವೆ-ನೀವು ನಮ್ಮ ಜೊತೆ ಭದ್ರವಾಗಿ ನಿಲ್ಲಿ ಎಂದು ಕರೆ ನೀಡಿದರು.
ಜಗದ್ಗುರು ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಕೆ.ವೆಂಕಟೇಶ್, ಶಾಸಕರುಗಳಾದ ಪುಟ್ಟರಂಗಶೆಟ್ಟಿ, ಯತೀಂದ್ರ ಸಿದ್ದರಾಮಯ್ಯ, ದರ್ಶನ್ ದೃವನಾರಾಯಣ್, ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು ಸೇರಿ ಉಪ್ಪಾರ ಸಮುದಾಯದ ಮುಖಂಡರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.