Thursday, January 30, 2025
Menu

ನಮ್ಮ ಡಿನ್ನರ್‌ ಪಾರ್ಟಿ ಸಹಿಸಲ್ಲ ಅಂದ್ರೆ ತಕ್ಕ ಉತ್ತರ ಕೊಡ್ತೇವೆ: ಪರಮೇಶ್ವರ್‌

ಡಿನ್ನರ್ ಪಾರ್ಟಿ ಮುಂದೂಡುವಂತೆ ಕಾಂಗ್ರೆಸ್ ಹೈಕಮಾಂಡ್​ನಿಂದ ಬಂದಿರುವ ಸೂಚನೆಯ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ನಮ್ಮ ಸಭೆಯನ್ನು ಸಹಿಸುವುದಿಲ್ಲವೆಂದು ಯಾರೂ ಹೇಳಿಲ್ಲ. ನಮ್ಮ ಸಭೆ ಸಹಿಸಲ್ಲ ಅಂದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ನಮಗೆ ಆ ಶಕ್ತಿ ಇದೆ ಎಂದು ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ ಅಷ್ಟೆ, ಸಭೆ ನಡೆಸುತ್ತೇವೆ ಎಂದಿದ್ದಾರೆ. ಪರಮೇಶ್ವರ್ ಇಂದು ಡಿನ್ನರ್ ಮೀಟಿಂಗ್​ ನಡೆಸಲು ಮುಂದಾಗಿದ್ದರು. ವಿದೇಶ ಪ್ರವಾಸದಿಂದ ದೆಹಲಿಗೆ ಆಗಮಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್​​ಗೆ ಮಾಹಿತಿ ನೀಡಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಪರಮೇಶ್ವರ್ ಡಿನ್ನರ್ ಪಾರ್ಟಿಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು.

ಹೈಕಮಾಂಡ್​ಗೆ ಡಿಸಿಎಂ ಡಿಕೆ ಶಿವಕುಮಾರ್ ದೂರು ನೀಡಿದ್ದಾರೆಯೇ ಎಂಬ ಪ್ರಶ್ನೆಗೆ, ಆ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಈ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್​​ರನ್ನೂ ಕರೆಯಬೇಕು ಎಂದು ಚರ್ಚೆ ಆಗಿತ್ತು. ರಾಜಕಾರಣ ಮಾಡುವುದಾದರೆ ಓಪನ್ ಆಗಿಯೇ ಮಾಡುತ್ತೇವೆ. ಮುಚ್ಚಿಟ್ಟು ಮಾಡುವಂಥದ್ದೇನೂ ಇಲ್ಲ ಎಂದರು.

ನಮ್ಮ ಡಿನ್ನರ್‌ ಪಾರ್ಟಿಗೆ ಹೈಕಮಾಂಡ್ ವಿರೋಧ ಇಲ್ಲ. ಚಿತ್ರದುರ್ಗ ಸಮಾವೇಶ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೆವು. ಶಾಸಕರ ಮೀಟಿಂಗ್ ಅಂದಾಗ ಅವರ ಗಮನಕ್ಕೆ ಹೋಗುತ್ತದೆ. ಹೀಗಾಗಿ ರಣದೀಪ್ ಸುರ್ಜೇವಾಲ ಕರೆ ಮಾಡಿ ಭಾಗವಹಿಸಲು ಉತ್ಸುಕವಾಗಿರುವುದಾಗಿ ತಿಳಿಸಿದರು. ಅವರಿಗೂ ಆಹ್ವಾನ ಕೊಟ್ಟಿದ್ದೇವೆ. ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *