ತೋಟಗಾರಿಕೆ ಇಲಾಖೆಯು ಜೈವಿಕ್ ಕೃಷಿಕ್ ಸೊಸೈಟಿಯ ಸಹಯೋಗದಲ್ಲಿ ಲಾಲ್ ಬಾಗ್ ನ ಡಾ.ಎಂ.ಎಚ್. ಮರೀಗೌಡ ಸಭಾಂಗಣದಲ್ಲಿ ಮೇ 23 ರಿಂದ 25 ರವರೆಗೆ ಮೂರು ದಿನ ಸಾವಯವ ಮಾವು ಮತ್ತು ಹಲಸಿನ ಮೇಳ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ರಮೇಶ ತಿಳಿಸಿದ್ದಾರೆ.
ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಮೇ 23 ರಂದು ಮಧ್ಯಾಹ್ನ 3ಕ್ಕೆ ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಷಾಲ್ ಮೇಳವನ್ನು ಉದ್ಘಾಟಿಸಲಿದ್ದಾರೆ. ಮೇ 24 ಮತ್ತು 25 ರಂದು ಬೆಳಿಗ್ಗೆ 7.00 ರಿಂದ ಸಂಜೆ 6.00 ರವರೆಗೆ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದರು.
ಕರ್ನಾಟಕ ರಾಜ್ಯ 2004 ರಲ್ಲಿ ಸಾವಯವ ಕೃಷಿ ನೀತಿಯನ್ನು ಹೊರತಂದ ಪ್ರಥಮ ರಾಜ್ಯ. ಇದರಿಂದಾಗಿ ಸಾವಯವ ಕೃಷಿ ಉತ್ತೇಜನದಲ್ಲಿ ಇಡೀ ದೇಶದಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ. ಅಂದಿನಿಂದ ಸರ್ಕಾರ ಮತ್ತು ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು ಪರಿಸರ ಪೂರಕ ಕೃಷಿಗೆ ನೀಡುತ್ತಿರುವ ಉತ್ತೇಜನದಿಂದಾಗಿ ಒಂದು ಲಕ್ಷಕ್ಕೂ ಮಿಗಿಲಾದ ಸಾವಯವ ಕೃಷಿಕರಿದ್ದಾರೆ ಎಂದು ತಿಳಿಸಿದರು.
ಕಳೆದ 3 ವರ್ಷಗಳಿಂದ ತೋಟಗಾರಿಕೆ ಇಲಾಖೆಯು ಪರಂಪರಾಗತ ಕೃಷಿ ವಿಕಾಸ ಯೋಜನೆಯ ಅಡಿಯಲ್ಲಿ ರಾಜ್ಯದ 18 ಜಿಲ್ಲೆಗಳಲ್ಲಿ ಸಾವಯವ ಕೃಷಿಯನ್ನು ಉತ್ತೇಜನಗೊಳಿಸುತ್ತಿದೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಾವಯವ ಕೃಷಿಕರ ಕ್ಲಸ್ಟರ್ ಇದ್ದು ಒಟ್ಟು 11630 ರೈತರನ್ನೊಳಗೊಂಡಂತೆ ಸುಮಾರು 10000 ಹೆಕ್ಟರ್ ಪ್ರದೇಶದಲ್ಲಿ ಈ ಯೋಜನೆಯನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 1.5 ಲಕ್ಷಕ್ಕೂ ಮಿಗಿಲಾದ ಸಹಜ ಕೃಷಿಕರಿದ್ದು ಅವರುಗಳು ಬೆಳೆಯುವ ಹಣ್ಣು ತರಕಾರಿ, ದವಸ ಧಾನ್ಯಗಳು ಮತ್ತು ಬೆಲ್ಲ, ತೈಲ ಇತ್ಯಾದಿ ಮೌಲ್ಯವರ್ಧಿತ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ರಾಜ್ಯದಲ್ಲಿ ಅನೇಕ ಸಂಘ ಸಂಸ್ಥೆಗಳಿವೆ. ಅವುಗಳಲ್ಲಿ, 2005 ರಲ್ಲಿ ಸರ್ಕಾರದ ಉತ್ತೇಜನದಿಂದ ಪ್ರಾರಂಭ ವಾದ ಜೈವಿಕ್ ಕೃಷಿಕ್ ಸೊಸೈಟಿಯು ಲಾಲ್ ಬಾಗ್ ನಲ್ಲಿ ಇದ್ದು ಸಾವಯವ ಕೃಷಿ ಉತ್ತೇಜನ ಮತ್ತು ಕೃಷಿಕ ವಸ್ತುಗಳಿಗೆ ಮಾರುಕಟ್ಟೆ ಒದಗಿಸುತ್ತಾ ಬಂದಿದೆ. ಜೊತೆಗೆ ಬೆಂಗಳೂರು ಮತ್ತು ಇತರ ಕಡೆ ಗ್ರಾಹಕರಿಗೆ ಸಾವಯವ ಆಹಾರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಾವಯವ ಕೃಷಿಕರಿಗೆ ಮಾರುಕಟ್ಟೆ ಒದಗಿಸಲು ಆಗಿಂದಾಗ್ಗೆ ಮೇಳವನ್ನು ಆಯೋಜಿಸಲಾಗಿದೆ
ಬೇಸಿಗೆ ಕಾಲಿಟ್ಟರೆ ಮಾವು ಮತ್ತು ಹಲಸಿನ ಘಮಲು ಮೋಹಕಗೊಳಿಸುತ್ತದೆ. ಹಣ್ಣುಗಳ ರಾಜ ಎನಿಸಿದ ಮಾವು ಸವಿಯಲು ಎಲ್ಲರೂ ಕಾಯುತ್ತಿರುತ್ತಾರೆ, ಮಾರುಕಟ್ಟೆಯಲ್ಲಿ ಸಿಗುವ ಮಾವು ರಾಸಾಯನಿಗಳ ಉಂಡು, ಬಲವಂತಕ್ಕೆ ಹಣ್ಣಾಗಿ ಮಾರಾಟಕ್ಕೆ ಬರುತ್ತದೆ. ನೈಸರ್ಗಿಕವಾಗಿ ಬೆಳೆಸಿದ, ಯಾವುದೇ ರಾಸಾಯನಿಕಗಳ ಬಳಕೆ ಇಲ್ಲದೆ ಮಾಗಿಸಿದ ‘ಸಾವಯವ ಮಾವಿನ’ ರುಚಿ ಬಲ್ಲವರೇ ಬಲ್ಲರು ಎಂದು ತಿಳಿಸಿದರು.
ಬಾಯಿಗಿಟ್ಟರೆ ಜೇನು ಸವಿದಂತೆನಿಸುವ ಹಲಸಿನದು ಅದ್ಭುತ ಲೋಕ, ಎಳೆಯ ಕಾಯಿಯಿಂದ ಸೊಳೆ ಬಿಡಿಸಿದ ಬೀಜದವರೆಗೆ ತಿನ್ನಲು ಬರುವ ಕಲ್ಪವೃಕ್ಷ, ಹಲಸಿನ ಕಾಯಿಯ ನಿರಂತರ ಸೇವನೆಯಿಂದ ಮಧುಮೇಹ, ಕ್ಯಾನ್ಸರ್, ಮತ್ತು ಮಲಬದ್ಧತೆಯನ್ನು ದೂರವಿಡಬಹುದು, ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಲಸನ್ನು ಮನೆ ಮಂದಿಯೆಲ್ಲಾ ತಿಂದು ಸವಿಯಬೇಕು, ಸಾವಯವ ಮಾವು ಮತ್ತು ಹಲಸಿನ ಹಣ್ಣು ಅಡುಗೆ ಮತ್ತು ಮೌಲ್ಯವರ್ಧಿತ ಪದಾರ್ಥಗಳನ್ನು ಗ್ರಾಹಕರಿಗೆ ಪರಿಚಯಿಸಲು ಈ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕದ ವಿವಿಧ ಭಾಗಗಳಿಂದ ಸಾವಯವ ಮಾವು ಮತ್ತು ಹಲಸಿನ ಬೆಳೆಗಾರರು ವೈವಿಧ್ಯಮಯ ತಳಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಲಿದ್ದಾರೆ. ಪ್ರಪಂಚದಲ್ಲಿಯೇ ಅತ್ಯಂತ ದುಬಾರಿ ಮಾವಿನ ತಳಿ “ಮಿಯಾಜಕಿ ಮಾವು” ಪ್ರದರ್ಶನದಲ್ಲಿ ಇದ್ದರೆ, ಅಪರೂಪವಾಗುತ್ತಿರುವ ಅಪ್ಪೆ ಮಿಡಿ, ಟಿಪ್ಪುಸುಲ್ತಾನ ಕಾಲದ ಮಾವಿನ ತಳಿಗಳ ಹಣ್ಣುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ. ಇದೇ ರೀತಿ ಹಲಸಿನ ಮಹತ್ವ ಮತ್ತು ವೈವಿಧ್ಯತೆಯನ್ನು ಸಹ ಈ ಹಬ್ಬದಲ್ಲಿ ಪ್ರದರ್ಶಿಸಲಾಗುತ್ತಿದೆ.
ಬೀಜ ರಹಿತ ಹಲಸು ಪ್ರದರ್ಶನದಲ್ಲಿ ಇದ್ದರೆ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ, ವಿಶೇಷವಾಗಿ ಕೆಂಪು ಚಂದ್ರ ಹಲಸು ತಿನ್ನಲು ಸಿಗಲಿದೆ. ಹಣ್ಣುಗಳನ್ನು ಮನೆಗೂ ಕೊಂಡೊಯ್ಯಬಹುದು. ಹಲಸಿನ ಐಸ್ ಕ್ರೀಂ, ಚಿಪ್ಸ್, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿಯ ಮಳಿಗೆಗಳು ಮೇಳದಲ್ಲಿ ಬರಲಿವೆ ಹಾಗೂ ಹಲಸು ಹೆಚ್ಚುವ ಯಂತ್ರವೂ ಸಹ ಸಿಗಲಿದೆ ಎಂದು ತಿಳಿಸಿದರು.
ತುಮಕೂರಿನ ಹಿರೇಹಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದವರು ವಿವಿಧ ರೀತಿಯ ಕೆಂಪು ಹಲಸಿನ ತಳಿಗಳನ್ನು ಪ್ರದರ್ಶನಕ್ಕೆ ತರಲಿದ್ದಾರೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡುತ್ತಾರೆ. ಸಹಜ ಸಮೃದ್ಧ – ಸಾವಯವ ಕೃಷಿಕರ ಬಳಗವು, 75 ಕ್ಕೂ ಹೆಚ್ಚಿನ ಹಲಸು ಮತ್ತು ಮಾವಿನ ತಳಿಗಳನ್ನು ಪ್ರದರ್ಶನಕ್ಕೆ ತರಲಿದ್ದಾರೆ.
ಮೇ 24 ರಂದು ಬೆಳಿಗ್ಗೆ 11.00 ಗಂಟೆಗೆ ಸಾವಯವ ಮಾವು ಮತ್ತು ಹಲಸಿನ ಕೃಷಿಯ ಬಗ್ಗೆ, ಆಸಕ್ತ ರೈತರಿಗೆ ತರಬೇತಿ ನೀಡಲಾಗುವುದು. ತೋಟಗಾರಿಕಾ ತಜ್ಞರಾದ ಡಾ.ರಾಮಕೃಷ್ಣಪ್ಪ ಮತ್ತು ಡಾ. ಹಿತ್ತಲಮನಿ ಅಗತ್ಯ ಮಾಹಿತಿ ನೀಡಲಿದ್ದಾರೆ. ಕೃಷಿ ಪಂಡಿತ ಶಿವನಾಪುರ ರಮೇಶ್ ಅವರು ಹಲಸಿನ ತೋಟ ಕಟ್ಟುವ ಬಗೆಗಿನ ಮಾರ್ಗದರ್ಶನ ಮಾಡಲಿದ್ದಾರೆ.
ಅಂದು ಬೆಳಿಗ್ಗೆ 11.00 ಗಂಟೆಗೆ ಮಕ್ಕಳಿಗಾಗಿ ಮಾವು ಮತ್ತು ಹಲಸಿನ ಚಿತ್ರಕಲಾ ಸ್ಪರ್ಧೆ ಮತ್ತು ಮಧ್ಯಾಹ್ನ 3ಕ್ಕೆ ಹಿರಿಯರಿಗಾಗಿ ಹಲಸು ಎತ್ತುವ ಮತ್ತು ಹಲಸಿನ ತೂಕ ಊಹಿಸುವ ಸ್ಪರ್ಧೆಯನ್ನುಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಬರುವ 40 ಗ್ರಾಮೀಣ ಉದ್ದಿಮೆದಾರರು, ರೈತ ಕಂಪನಿಗಳು, ರೈತ ಮತ್ತು ಮಹಿಳಾ ಗುಂಪುಗಳು ಹಲಸು ಮತ್ತು ಮಾವಿನ ಮೌಲ್ಯವರ್ಧಿತ ಪದಾರ್ಥಗಳು, ಸಿರಿಧಾನ್ಯ, ಸಾವಯವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ತರಲಿದ್ದು, ಮುಂಗಾರಿಗೆ ಬಿತ್ತಲು ದೇಸಿ ಬೀಜಗಳು ಸಹ ಸಿಗಲಿವೆ.
ಜೈವಿಕ್ ಬಾಸ್ಕೆಟ್
ಗುಣಮಟ್ಟದ ಮತ್ತು ಅಧಿಕೃತ ಸಾವಯವ ಪದಾರ್ಥಗಳನ್ನು ಬೆಳೆಯುತ್ತಿರುವ ಬೆಂಗಳೂರು ನಗರದ ಗ್ರಾಹಕರ ಮನೆ ಬಾಗಿಲಿಗೆ ಆನ್ಲೈನ್ ಮೂಲಕ ತಲುಪಿಸಲು ಹಣ್ಣು ತರಕಾರಿ, ಕಿರುಧಾನ್ಯ ಗಳನ್ನೊಳಗೊಂಡ ಜೈವಿಕ್ ಬಾಸ್ಕೆಟ್ ಅನ್ನು ಮೇಳದ ಉದ್ಘಾಟನೆ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ಜೈವಿಕ್ ಬಾಸ್ಕೆಟ್ ಕೊಳ್ಳಲಿಚ್ಚಿಸುವವರು ದೂರವಾಣಿ ಸಂಖ್ಯೆ: 8971654618 ಸಂಪರ್ಕಿಸಬಹುದು.
ಸಾವಯ ಸಸಿ ಮತ್ತು ಬೀಜಗಳು: ಸಾವಯ ಪದ್ಧತಿಗಳ ಮೂಲಕ ಸಸ್ಯ ಉತ್ಪಾದನೆ ಮತ್ತು ಪಾಲನೆ ಮಾಡುತ್ತಿರುವ ದೇವನಹಳ್ಳಿಯ ತೇಜ ನರ್ಸರಿ ಮತ್ತು ಮೈಸೂರಿನ ಬೆಳವಲ ತೋಟದವರು ಹಲಸು, ಮಾವು ಮತ್ತು ಇತರೆ ಅಪರೂಪದ ಮತ್ತು ಗುಣಮಟ್ಟದ ಹಣ್ಣಿನ ಸಸಿಗಳನ್ನು ಮಾರಾಟ ಮಾಡಲಿದ್ದಾರೆ.
ಹೆಚ್ಚಿನ ವಿವರಗಳಿಗೆ ಶ್ರೀಮತಿ ಕವಿತಾ ಮೊಬೈಲ್ ದೂರವಾಣಿ ಸಂಖ್ಯೆ 8105579839 ಹಾಗೂ ದರ್ಶನ್: ಮೊಬೈಲ್ ದೂರವಾಣಿ ಸಂಖ್ಯೆ 9742696577 ಕ್ಕೆ ಸಂಪರ್ಕಿಸಬಹುದು ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ತೋಟಕಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ವಿಶ್ವನಾಥ್, ಶ್ರೀಮತಿ ಹೇಮಾ ಹಾಗೂ ಸಹಾಯಕ ನಿರ್ದೇಶಕರಾದ ಪರಶಿವಮೂರ್ತಿ ಉಪಸ್ಥಿತರಿದ್ದರು.