Menu

ನನ್ನ ವಿರುದ್ಧ ಗಾಡ್ಕರ್ ಮಾಡಿರುವ ಆರೋಪಗಳೆಲ್ಲ ಸುಳ್ಳು: ರಾಜ್ಯಪಾಲರಿಗೆ ದಿನೇಶ್‌ ಅಮೀನ್‌ ದಾಖಲೆ ಸಹಿತ ಪತ್ರ

dinesh amin mattu

ನಾನು ತುಮಕೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ನಿವೇಶನ ಪಡೆದಿದ್ದೇನೆ ಎನ್ನುವ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು ಮತ್ತು ನಿರಾಧಾರವಾದುದು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾನು ಯಾವುದೇ ನಿವೇಶನ ಪಡೆದಿಲ್ಲ. ಕೇಂದ್ರ ಸರ್ಕಾರದ  ಐಡಿಎಸ್ ಎಂಟಿ ಯೋಜನೆಯಡಿ ನಾನು ನಿವೇಶನ ಪಡೆದಿದ್ದು ಅದಕ್ಕೆ ಸಂಬಂಧಿಸಿದ ಎಲ್ಲ ಷರತ್ತುಗಳನ್ನು ಪಾಲಿಸಿದ್ದೇನೆ. ಅದರಲ್ಲಿ ಸ್ಥಳೀಯವಾಗಿ ಹದಿನೈದು ವರ್ಷ ನಿವಾಸಿ ಯಾಗಿ ಇರಬೇಕೆಂಬ ಯಾವ ಷರತ್ತು  ಇಲ್ಲ ಎಂದು ಹಿರಿಯ ಪತ್ರಕರ್ತ ಮತ್ತು ಸಿಎಂ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅವರು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸಂಬಂಧಿಸಿದ ಷರತ್ತುಗಳುಳ್ಳ ನಿವೇಶನ ಹಂಚಿಕೆ ಪತ್ರವನ್ನು ಲಗತ್ತಿಸಿ  ಪತ್ರ ಬರೆದಿರುವ ಅವರು, ವಿಧಾನ ಪರಿಷತ್‌ ನಾಮನಿರ್ದೇಶನ ಪಟ್ಟಿಯಲ್ಲಿ ತನ್ನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಜಿ.ಎಂ.ಗಾಡ್ಕರ್ ಎಂಬವರು ರಾಜ್ಯಪಾಲರಿಗೆ  ಪತ್ರ ಬರೆದು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಸುಳ್ಳು ಆರೋಪ ಮಾಡಿರುವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಿ ಎಂದು  ಮನವಿ ಮಾಡಿದ್ದಾರೆ.

ಗಾಡ್ಕರ್ ಎಂಬ ಅಪರಿಚಿತ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ. ನನ್ನ ವಿವರಣೆಗಳನ್ನು ಗಂಭೀರವಾಗಿ ಪರಿಗಣಿಸಿ ತಾವು ಆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ನೀಡಬೇಕು. ಪತ್ರಕರ್ತನಾಗಿರುವ ನನ್ನ ವಿರುದ್ಧ ನನಗಾಗದ ವ್ಯಕ್ತಿಗಳು ಪೊಲೀಸ್ ಠಾಣೆಗಳಲ್ಲಿ ಹಲವಾರು ಬಾರಿ ದೂರು ದಾಖಲಿಸಿ ರುವುದು ನನ್ನ ಗಮನಕ್ಕೂ ಬಂದಿದೆ. ದೂರುಗಳೆಲ್ಲವೂ ದುರುದ್ದೇಶದಿಂದ ಕೂಡಿದ ಮತ್ತು ಆಧಾರರಹಿತವಾಗಿದ್ದ ಕಾರಣ ಯಾವುದೇ ಪ್ರಕರಣದಲ್ಲಿ ನನ್ನ ಮೇಲಿನ ಆರೋಪಗಳು ಸಾಬೀತಾಗಿಲ್ಲ. ದೂರುದಾರರು ಉಲ್ಲೇಖಿಸಿದ ಫೇಕ್ ನ್ಯೂಸ್ ಪ್ರಕರಣದಲ್ಲಿಯೂ ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ಸಾಕ್ಷ್ಯಾಧಾರಗಳಿಲ್ಲದ  ಕಾರಣ ಎರಡೂ ವರ್ಷಗಳಾದರೂ ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ಹಾಗಾಗಿ ನನ್ನ ಮೇಲೆ ಯಾವುದೇ ದೋಷಾರೋಪ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ದೂರುದಾರರು ಉಲ್ಲೇಖಿಸಿರುವ “ದಿ ಪಾಲಿಸಿ ಫ್ರಂಟ್” ಸಂಸ್ಥೆಯಲ್ಲಿ ನಾನು ಮಾಲೀಕನೂ ಅಲ್ಲ, ಪಾಲುದಾರನೂ ಅಲ್ಲ. ನನಗೆ ಯಾವುದೇ ಸಂಸ್ಥೆಯನ್ನು ಬೇನಾಮಿಯಾಗಿ ನಡೆಸುವ ಅವಶ್ಯಕತೆಯೂ ಇಲ್ಲ. ಸುಳ್ಳು ಮಾಹಿತಿಗಳನ್ನು ಆಧರಿಸಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ ದೂರುದಾರರು ನನ್ನ ಚಾರಿತ್ರ್ಯ ಹನನದ ಏಕೈಕ ಉದ್ದೇಶದಿಂದ  ಈ ಆರೋಪ ಮಾಡಿದ್ದಾರೆ ಎಂದು ಮಟ್ಟು ಅವರು ರಾಜ್ಯಪಾಲರಿಗೆ ಪತ್ರದಲ್ಲಿ ತಿಳಿಸಿದ್ದಾರೆ.

40 ವರ್ಷಗಳಿಂದ ಪತ್ರಿಕಾ ವೃತ್ತಿಯಲ್ಲಿದ್ದು ಮತ್ತು ಆ ಕಾರಣದಿಂದಾಗಿ ಸಾರ್ವಜನಿಕ ಜೀವನದಲ್ಲಿರುವ ನಾನು ಸಂವಿಧಾನ ಮತ್ತು ನೆಲದ ಕಾನೂನಿಗೆ ಗೌರವ ಕೊಟ್ಟುಕೊಂಡು ಬದುಕಿದವನು. ವೈಯಕ್ತಿಕ ದ್ವೇಷಾಸೂಯೆಯಿಂದ ಕೆಲವರು ಆರೋಪಗಳನ್ನು ಮಾಡಿದ್ದರೂ ಅವುಗಳು ಸಾಬೀತಾಗದೆ ಬಿದ್ದುಹೋಗಿರುವುದು ನಾನು ಪಾಲಿಸಿಕೊಂಡು ಬಂದಿರುವ ಪ್ರಾಮಾಣಿಕ ಬದುಕು, ಸತ್ಯ ಮತ್ತು ನ್ಯಾಯ ನಿಷ್ಠೆಗೆ ಸಾಕ್ಷಿಯಾಗಿದೆ. ನನ್ನ ಚಾರಿತ್ರ್ಯಹನನ ಮಾಡುವ ದುರುದ್ದೇಶದಿಂದ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲೆ ಮಾಡಲಿದ್ದೇನೆ ಎನ್ನುವುದನ್ನೂ ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *