Menu

ಕಳಪೆ ಮೂಲಸೌಕರ್ಯ ಹೊಂದಿರುವ ಪ್ಯಾರಾ ಮೆಡಿಕಲ್ ಸಂಸ್ಥೆ ಮುಚ್ಚಲು ಆದೇಶ

ಬೆಂಗಳೂರು: ಕಳಪೆ ಗುಣಮಟ್ಟದ ಪ್ಯಾರಾ-ಮೆಡಿಕಲ್ ಕಾಲೇಜುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳಪೆ ಮೂಲ ಸೌಕರ್ಯ ಹೊಂದಿರುವ ಸಂಸ್ಥೆಗಳು ಹಾಗೂ ಅಂಗಸಂಸ್ಥೆಗಳನ್ನು ಮುಚ್ಚಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ನಿರ್ದೇಶನ ನೀಡಿದ್ದಾರೆ.

ಮೂಲಸೌಕರ್ಯ ಮತ್ತು ಬೋಧನಾ ಮಾನದಂಡಗಳನ್ನು ಪೂರೈಸಲು ವಿಫಲವಾದ ಸಂಸ್ಥೆಗಳನ್ನು ಕೂಡಲೇ ಮುಚ್ಚುವಂತೆ ಸೂಚನೆ ನೀಡಲಾಗಿದೆ.

ಗುರುವಾರ ವಿಕಾಸಸೌಧದಲ್ಲಿ ನಡೆದ ರಾಜ್ಯ ಪ್ಯಾರಾ-ಮೆಡಿಕಲ್ ಮಂಡಳಿಯ ಪರಿಶೀಲನಾ ಸಭೆಯಲ್ಲಿ ಸಚಿವರು, ಹಲವಾರು ಖಾಸಗಿ ಕಾಲೇಜುಗಳಲ್ಲಿನ ನ್ಯೂನತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಅಸಮರ್ಪಕ ಸೌಲಭ್ಯಗಳೊಂದಿಗೆ ಇಕ್ಕಟ್ಟಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳಿವೆ. ಒಂದು ಸಂಸ್ಥೆಯು ನೂರಾರು ವಿದ್ಯಾರ್ಥಿಗಳಿಗೆ ಒಂದೇ ಸೂಕ್ಷ್ಮದರ್ಶಕವನ್ನು ನೀಡುತ್ತಿದೆ ಹಾಗೂ ಇನ್ನೊಂದು ಸರಿಯಾದ ಬೆಳಕಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ವರದಿ ನೀಡಿದ್ದಾರೆ.

ಭಾರಿ ಶುಲ್ಕ ಪಡೆದರೂ ಕಳಪೆ ಬೋಧನೆ

ಖಾಸಗಿ ಸಂಸ್ಥೆಗಳು ಅನುಮೋದನೆ ಪಡೆಯುವಾಗ ದಾರಿತಪ್ಪಿಸುವ ಮಾಹಿತಿ ನೀಡುತ್ತಿವೆ. ಭಾರಿ ಶುಲ್ಕವನ್ನು ವಿಧಿಸುತ್ತಿದ್ದರೂ ಅನುಮತಿಸಿದ ಗುಣಮಟ್ಟದ ಶಿಕ್ಷಣವನ್ನು ನೀಡಲು ವಿಫಲವಾಗಿವೆ ಎಂದು ಡಾ. ಪಾಟೀಲ್ ತಿಳಿಸಿದ್ದಾರೆ.

ರಾಜ್ಯದ 566 ಪ್ಯಾರಾ-ಮೆಡಿಕಲ್ ಕಾಲೇಜುಗಳಲ್ಲಿ 529 ಖಾಸಗಿಯಾಗಿ ನಡೆಸಲ್ಪಡುತ್ತಿದ್ದು, 2024-25 ಶೈಕ್ಷಣಿಕ ವರ್ಷದಲ್ಲಿ 22,256 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಖಾಸಗಿ ಕಾಲೇಜುಗಳು ಮೂರು ವರ್ಷಗಳ ಕೋರ್ಸ್‌ಗೆ ವಾರ್ಷಿಕವಾಗಿ 20,000 ರೂ. ಶುಲ್ಕ ವಿಧಿಸುತ್ತವೆ, ಸರ್ಕಾರಿ ಸಂಸ್ಥೆಗಳು 8,500 ರೂ. ಶುಲ್ಕ ಪಡೆಯುತ್ತಿವೆ.

ಹತ್ತಕ್ಕೂ ಹೆಚ್ಚು ಕಾಲೇಜುಗಳು ಪ್ಯಾರಾ-ಮೆಡಿಕಲ್ ಮಂಡಳಿಯ ಅನುಮೋದನೆಯಿಲ್ಲದೆ ವಿದ್ಯಾರ್ಥಿಗಳನ್ನು ಇತರ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾಯಿಸಿರುವುದು ಬಹಿರಂಗವಾಗಿದೆ. ಹಲವಾರು ಸಂಸ್ಥೆಗಳು ದಾಖಲಾದ ಕೋರ್ಸ್‌ಗಳಿಗೆ ಅಗತ್ಯವಾದ ಬೋಧನೆ, ತರಬೇತಿಯನ್ನು ನೀಡುವಲ್ಲಿ ವಿಫಲವಾಗಿರುವುದು ಕಂಡುಬಂದಿದೆ.

“ಯಾವುದೇ ಪರಿಗಣನೆಯಿಲ್ಲದೆ ಅಂತಹ ಕಾಲೇಜುಗಳನ್ನು ಮುಚ್ಚಿ. ನಾವು ಈ ಸಂಸ್ಥೆಗಳಿಗೆ ಕಠಿಣ ಸಂದೇಶವನ್ನು ಕಳುಹಿಸಬೇಕು”. ವಿದ್ಯಾರ್ಥಿಗಳನ್ನು ಉತ್ತಮ ಸಂಸ್ಥೆಗಳಿಗೆ ಸ್ಥಳಾಂತರಿಸಬೇಕು ಎಂದು ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ಯಾರಾ ಮೆಡಿಕಲ್‌ ಕ್ಷೇತ್ರದಲ್ಲಿ ವಿವಿಧ ತರಬೇತಿ

ಕರ್ನಾಟಕದಲ್ಲಿ ಪ್ಯಾರಾ-ಮೆಡಿಕಲ್ ಸ್ಟ್ರೀಮ್ ಅಡಿ ವಿವಿಧ ಡಿಪ್ಲೊಮಾ ಕೋರ್ಸ್‌ಗಳು, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ (DMLT), ಡಿಪ್ಲೊಮಾ ಇನ್ ಮೆಡಿಕಲ್ ಇಮೇಜಿಂಗ್ ತಂತ್ರಜ್ಞಾನ (DMIT), ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ (DHI), ಡಿಪ್ಲೊಮಾ ಇನ್ ಮೆಡಿಕಲ್ ರೆಕಾರ್ಡ್ಸ್ ತಂತ್ರಜ್ಞಾನ (DMRT), ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಅರಿವಳಿಕೆ ತಂತ್ರಜ್ಞಾನ (DOT & AT), ಡಿಪ್ಲೊಮಾ ಇನ್ ಡಯಾಲಿಸಿಸ್ ತಂತ್ರಜ್ಞಾನ (DDT), ಡಿಪ್ಲೊಮಾ ಇನ್ ಆಪ್ತಾಲ್ಮಿಕ್ ತಂತ್ರಜ್ಞಾನ (DOT), ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ಸ್ (DDM) ಮತ್ತು ಡಿಪ್ಲೊಮಾ ಇನ್ ಡೆಂಟಲ್ ಹೈಜೀನ್ (DDH) ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ಯಶಸ್ವಿಯಾದವರು ಆಸ್ಪತ್ರೆಗಳು, ವೈದ್ಯಕೀಯ ಮತ್ತು ದಂತ ಕಾಲೇಜುಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕ್ಲಿನಿಕಲ್ ಪ್ರಯೋಗಾಲಯಗಳಲ್ಲಿ ಹುದ್ದೆಗಳಿಗೆ ಅರ್ಹರಾಗುತ್ತಾರೆ.

ಪ್ಯಾರಾ-ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವುದು ಮತ್ತು ವಿದ್ಯಾರ್ಥಿಗಳು ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹಾಗೂ ಸೂಕ್ತ ವೃತ್ತಿಜೀವನಕ್ಕೆ ಸರಿಯಾದ ತರಬೇತಿಯನ್ನು ಪಡೆಯುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್ ಮತ್ತು ಪ್ಯಾರಾ-ವೈದ್ಯಕೀಯ ಮಂಡಳಿಯ ವಿಶೇಷ ಅಧಿಕಾರಿ ಡಾ. ವಿಜಯ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *