ಕೇಂದ್ರ ಸರ್ಕಾರವನ್ನು ಟೀಕಿಸುವ ಘೋಷಣೆಗಳನ್ನು ಬರೆದ ಟೀ ಶರ್ಟ್ ಗಳನ್ನು ಧರಿಸಿ ಅನೇಕ ವಿರೋಧ ಪಕ್ಷದ ಸಂಸದರು ಸದನವನ್ನು ಪ್ರವೇಶಿಸಿದ್ದರಿಂದ ಲೋಕಸಭೆ ಕಲಾಪವನ್ನು ಹಲವು ಬಾರಿ ಗುರುವಾರ ಮುಂದೂಡಲಾಯಿತು.
ಸದನವು ಸರಿಯಾಗಿ ಕಾರ್ಯನಿರ್ವಹಿಸಬೇಕಿದ್ದರೆ ಟೀ ಶರ್ಟ್‌ಗಳನ್ನು ತೆಗೆದುಹಾಕುವಂತೆ ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾ ನಿರತ ಸಂಸದರನ್ನು ತರಾಟೆಗೆ ತೆಗೆದುಕೊಂಡರು.
ಕೆಲವು ಸದಸ್ಯರು ಸದನದ ಘನತೆ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಳ್ಳುತ್ತಿಲ್ಲ, ಟೀ ಶರ್ಟ್‌ಗಳನ್ನು ಧರಿಸುವುದು ಸಂಸದೀಯ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಸ್ಪೀಕರ್ ಹೇಳಿದರು.
ಸದನದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಯಲು ಸಂಸತ್ತಿನ ನಿಯಮ 349 ಓದುವಂತೆ ಸ್ಪೀಕರ್ ಸಂಸದರಿಗೆ ಹೇಳಿದರು. “ನೀವು ಘೋಷಣೆಗಳನ್ನು ಬರೆದಿರುವ ಟೀ ಶರ್ಟ್ ಧರಿಸಿ ಬಂದರೆ, ಸದನವು ಕಾರ್ಯನಿರ್ವಹಿಸುವುದಿಲ್ಲ. ನೀವು ಟಿ-ಶರ್ಟ್ ತೆಗೆದು ಬಂದರೆ, ಸದನವು ಕಾರ್ಯನಿರ್ವಹಿಸುತ್ತದೆ” ಎಂದರು.
ಇದೇ ವಿಚಾರಕ್ಕೆ ಮೊದಲು ಸದನವನ್ನು ಮಧ್ಯಾಹ್ನ 12 ರವರೆಗೆ ಮುಂದೂಡಿದರು. ಮಧ್ಯಾಹ್ನ 12 ಗಂಟೆಗೆ ಸದನ ಮತ್ತೆ ಸೇರಿದಾಗ, ಅಧ್ಯಕ್ಷರಾಗಿದ್ದ ತೆಲುಗು ದೇಶಂ ಪಕ್ಷದ (ಟಿಡಿಪಿ) ಸದಸ್ಯ ಕೃಷ್ಣ ಪ್ರಸಾದ್ ತೆನ್ನೆಟ್ಟಿ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.
ಕನಿಮೋಳಿ ಮತ್ತು ಟಿ.ಶಿವ ಸೇರಿದಂತೆ ಡಿಎಂಕೆ ಸಂಸದರು ‘ನ್ಯಾಯಯುತ ಡಿಲಿಮಿಟೇಶನ್, ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ’ ಎಂಬ ಘೋಷಣೆ ಇದ್ದ ಶರ್ಟ್ ಧರಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು.
ಭಾಷಾ ಯುದ್ಧದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ದಕ್ಷಿಣದ ರಾಜ್ಯಗಳು, ವಿಶೇಷವಾಗಿ ತಮಿಳುನಾಡು ನಡುವಿನ ಕ್ಷೇತ್ರ ಮರುವಿಂಗಡಣೆಯ ಸಂಘರ್ಷ ಗಂಭೀರಗೊಂಡಿದೆ. ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ವಿರೋಧ ಪಕ್ಷಗಳ ಸಿಎಂಗಳನ್ನು ಆಹ್ವಾನಿಸಲಾಗಿದ್ದು, ಇದರಲ್ಲಿ ದಕ್ಷಿಣದ ರಾಜ್ಯಗಳು ಉದ್ದೇಶಿತ ಲೋಕಸಭಾ ಕ್ಷೇತ್ರ ಮರು ವಿಂಗಡನೆ ಬಗ್ಗೆ ಚರ್ಚಿಸಲಿವೆ.
2026ರಲ್ಲಿ ಇದು ಜಾರಿಗೆ ಬರುವ ನಿರೀಕ್ಷೆಯಿದ್ದು, ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುತ್ತದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ, ಜನನ ಪ್ರಮಾಣವನ್ನು ಯಶಸ್ವಿಯಾಗಿ ನಿಯಂತ್ರಿಸಿದ ದಕ್ಷಿಣದ ರಾಜ್ಯಗಳು ಸಂಸದೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳಬಹುದು ಎಂಬ ಶಂಕೆ ಇದೆ. ಇದೇ ವೇಳೆ ಹೆಚ್ಚಿನ ಜನಸಂಖ್ಯೆಯ ಬೆಳವಣಿಗೆಯನ್ನು ಹೊಂದಿರುವ ಉತ್ತರದ ರಾಜ್ಯಗಳು ಲಾಭ ಪಡೆಯುತ್ತವೆ ಎಂದು ಹೇಳಲಾಗುತ್ತಿದೆ.