Menu

ಸಿನಿಮಾ ಕಲಾವಿದರಿಗೆ ಡಿಸಿಎಂ ಧಮ್ಕಿ ಹಾಕಿದ್ದಾರೆಂದ ಆರ್‌. ಅಶೋಕ್‌

ಅನುದಾನ ಬೇಕಾದರೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎಂದು ದರ್ಪ ಮೆರೆದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ ಸಾಹೇಬರು ಈಗ ಕನ್ನಡ ಸಿನಿಮಾ ಕಲಾವಿದರಿಗೆ ಬಹಿರಂಗ ವೇದಿಕೆಯಲ್ಲಿ ಧಮ್ಕಿ ಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ದೂರಿದ್ದಾರೆ.

ಸಾಮಾಜಿಕ ಮಾಧ್ಯಮ  ಎಕ್ಸ್‌ನಲ್ಲಿ ಅಶೋಕ್‌ ಅವರು  ಈ ಬಗ್ಗೆ ಪೋಸ್ಟ್‌ ಮಾಡಿ,   ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಕಾಂಗ್ರೆಸ್ ಪಕ್ಷದ ರಾಜಕೀಯ ಪಾದ ಯಾತ್ರೆಗೆ ಸಿನಿಮಾ ಕಲಾವಿದರು ಬರುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್ ಪಕ್ಷಕ್ಕೆ ನಡೆದುಕೊಳ್ಳುವ ಕಲಾವಿದರಿಗೆ ಮನ್ನಣೆ ಸಿಗುತ್ತದೆ, ಇಲ್ಲವಾದರೆ ಸಿಗುವುದಿಲ್ಲ ಎನ್ನುವ ನಿಮ್ಮ ಮಾತು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದಿದ್ದಾರೆ.

ಸಮಾಜದಲ್ಲಿ ಎಲ್ಲರೂ ತಮಗೆ ಮತ್ತು ತಮ್ಮ ಪಕ್ಷಕ್ಕೆ ಸೆಲ್ಯೂಟ್ ಹೊಡೆದು, ತಮ್ಮ ಅಡಿಯಾಳುಗಳಂತೆ ನಡೆದುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯಿಂದ ಹೊರಗೆ ಬನ್ನಿ. ಕಲಾವಿದರು ಯಾರ ಸ್ವತ್ತೂ ಅಲ್ಲ. ಕಲಾವಿದರಿಗೆ ಅವರ ವಿವೇಚನೆಗೆ ತಕ್ಕಂತೆ ನಡೆದುಕೊಳ್ಳುವ, ಯಾರ ಜೊತೆ ಬೇಕಾದರೂ ಗುರುತಿಸಿ ಕೊಳ್ಳುವ ಅಥವಾ ಗುರುತಿಸಿಕೊಳ್ಳದಿರುವ ಸ್ವಾತಂತ್ರ್ಯವಿದೆ, ಹಕ್ಕಿದೆ. ಕಲಾವಿದರು ನಿಮ್ಮ  ಕರ್ನಾಟಕ ಕಾಂಗ್ರೆಸ್‌ ಕಾರ್ಯಕರ್ತರಲ್ಲ.  ನಿಮ್ಮ ಪಕ್ಷದ ಕಾರ್ಯ ಕರ್ತರನ್ನು ನಡೆಸಿಕೊಂಡ ರೀತಿ ಕಲಾವಿದರನ್ನು ನಡೆಸಿಕೊಳ್ಳಬೇಡಿ. ಕಲಾವಿದರಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್‌ ಹೇಳಿದ್ದೇನು? : “ನಾಡು, ನುಡಿ, ನೆಲ, ಜಲದ ಹೋರಾಟಕ್ಕೆ ಚಿತ್ರರಂಗದ ಸಹಕಾರ, ಬೆಂಬಲ, ಬದ್ಧತೆ ಇರಬೇಕು. ಆದರೆ ಮೇಕೆದಾಟು ಹೋರಾಟಕ್ಕೆ ಚಿತ್ರರಂಗದಿಂದ ಸರಿಯಾದ ಸಹಕಾರ ಸಿಗದೇ ಹೋದದ್ದರ ಬಗ್ಗೆ ನೋವು ಮತ್ತು ಸಿಟ್ಟು ಇದೆ” ಎಂದು ಡಿ.ಕೆ. ಶಿವಕುಮಾರ್ ವಿಧಾನಸೌಧದ ಮುಂಭಾಗದಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದರು. “ನನಗೆ ಸಿನಿಮಾರಂಗದವರ ಮೇಲೆ ಕೋಪ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ, ನಟರ ಮೇಲೆ ಸಿಟ್ಟಿದೆ. ನಾವು ಕಷ್ಟ ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ದೊರಕಿಸಲು “ನಮ್ಮ ನೀರು, ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ಮಾಡಿದೆವು. ಕೋವಿಡ್ ಸಮಯದಲ್ಲಿ ನಾನು, ಸಿದ್ದರಾಮಯ್ಯ ಅವರು ಸುಮಾರು 150 ಕಿ.ಮೀ ಪಾದಯಾತ್ರೆ ಮಾಡಿದೆವು. ನಾವು ನಮ್ಮ ಸ್ವಂತಕ್ಕಾಗಿ ಈ ಹೋರಾಟ ಮಾಡಲಿಲ್ಲ. ರಾಜ್ಯದ ಹಿತಕ್ಕಾಗಿ ನಡೆದೆವು. ಆದರೆ ಖುದ್ದು ಆಹ್ವಾನ ಕೊಟ್ಟರೂ ಒಂದಿಬ್ಬರನ್ನು ಹೊರತುಪಡಿಸಿ ಚಿತ್ರರಂಗದವರು ತಿರುಗಿ ನೋಡಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದರು.

Related Posts

Leave a Reply

Your email address will not be published. Required fields are marked *