ಹೇಡಿತನದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ “ಆಪರೇಷನ್ ಸಿಂಧೂರ” ಸೂಕ್ತ ಪ್ರತ್ಯುತ್ತರ. ನಾವು ಸರ್ಕಾರದೊಂದಿಗೆ ನಿಲ್ಲುತ್ತೇವೆ, ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಡಿಸಿಎಂ ಭಯೋತ್ಪಾದಕತೆಯನ್ನು ಬಗ್ಗುಬಡಿಯಲು ಸನ್ನದ್ಧವಾಗಿರುವ ಸೇನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
#OperationSindoor is a befitting reply to the cowardly Pahalgam terror attack.
We stand with the govt, we stand with our security forces.
Jai Hind.🇮🇳 pic.twitter.com/55vsj1rpbE
— DK Shivakumar (@DKShivakumar) May 7, 2025
ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತವು ಮಂಗಳವಾರ ತಡರಾತ್ರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಪಾಕ್‌ನಲ್ಲಿರುವ ಭಯೋತ್ಪಾದಕರ ತಾಣಗಳ ಮೇಲೆ ವಾಯುದಾಳಿ ನಡೆಸಿದೆ. ಮೂವರು ಈ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಭಾರತೀಯ ವಾಯುಪಡೆಯು ಪಾಕಿಸ್ತಾನದ ಚೀನಾ ನಿರ್ಮಿತ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದೆ ಎಂದೂ ಹೇಳಲಾಗುತ್ತಿದೆ.
ಭಾರತೀಯ ಸೇನೆ ಕಾರ್ಯಾಚಾರಣೆ ಬಗ್ಗೆ ಹೆಮ್ಮೆಯಿದೆ
ನವದೆಹಲಿಯಲ್ಲಿ ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ, “ಭದ್ರತಾ ಪಡೆಗಳ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ. ಅವರು ದೇಶದ ಘನತೆ, ಹಿತಾಸಕ್ತಿಯನ್ನು ಕಾಪಾಡುತ್ತಿದ್ದು, ಅವರಿಗೆ ನಾವೆಲ್ಲರೂ ನಮಿಸೋಣ. ಈ ಸಂದರ್ಭದಲ್ಲಿ ನಾವು ಅವರ ಬೆನ್ನಿಗೆ ನಿಲ್ಲೋಣ. ಕಾಂಗ್ರೆಸ್ ಪಕ್ಷ ದೇಶದ ಹಿತರಕ್ಷಣೆ ವಿಚಾರದಲ್ಲಿ ಸೇನೆ ಬೆನ್ನಿಗೆ ನಿಂತು ಬೆಂಬಲ ನೀಡಲಿದೆ” ಎಂದು ಹೇಳಿದ್ದಾರೆ.
ಕರ್ನಾಟಕದ ಪ್ರಜೆಗಳು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟಿದ್ದರ ಬಗ್ಗೆ ಕೇಳಿದಾಗ, “ನಮ್ಮ ರಾಜ್ಯ ಮಾತ್ರವಲ್ಲ, ದೇಶದ ಇತರೆ ಭಾಗಗಳ ಜನರು ಮೃತರಾಗಿದ್ದರು. ಈ ವಿಚಾರದಲ್ಲಿ ಕೇವಲ ಕರ್ನಾಟಕ ಎಂದು ನೋಡಬಾರದು, ಇಡೀ ದೇಶವೇ ಒಂದು ಎಂದು ನೋಡಬೇಕು. ನಾವೆಲ್ಲರೂ ಈ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕು, ಅದೇ ರೀತಿ ಒಟ್ಟಾಗಿ ನಿಂತಿದ್ದೇವೆ” ಎಂದರು.
ಪಹಲ್ಗಾಮ್ ದಾಳಿಯಲ್ಲಿ ಮೃತರ ಕುಟುಂಬದವರು ಈ ಆಪರೇಷನ್ ನಿಂದ ನೆಮ್ಮದಿ ಪಡೆಯುವರೇ, ವಿರೋಧ ಪಕ್ಷ ಕೂಡ ಸರ್ಕಾರದ ಬೆನ್ನಿಗೆ ನಿಂತಿದೆಯಲ್ಲವೇ ಎಂದು ಕೇಳಿದಾಗ, “ಹೌದು, ನಾವು ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ನಿಂತಿದ್ದೇವೆ. ಬೆಲೆ ಏರಿಕೆ ವಿಚಾರವಾಗಿ ಇಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಅದನ್ನು ನಾವು ರದ್ದುಗೊಳಿಸಿದ್ದೇವೆ. ಈ ಸಂದರ್ಭದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಹೀಗಾಗಿ ಈ ಪ್ರತಿಭಟನಾ ಸಮಾವೇಶವನ್ನು ಮುಂದೂಡಿದ್ದೇವೆ” ಎಂದು ತಿಳಿಸಿದರು.