ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆಯು ಮಂಗಳವಾರ ತಡರಾತ್ರಿ ‘ಆಪರೇಷನ್ ಸಿಂಧೂರ್ʼ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಪಾಕಿಸ್ತಾನದ ಉಗ್ರರು ಭಾರತದ ಹಿಂದೂ ಮಹಿಳೆಯ ಕುಂಕುಮ ಅಳಿಸಿ ಕಣ್ಣೀರಿಡುವಂತೆ ಮಾಡಿದ್ದರು ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಉಗ್ರ ನೆಲೆ ಮೇಲೆ ಭಾರತ ದಾಳಿ ನಡೆಸಿದೆ. ಅದಕ್ಕೆ ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿದೆ. ಆರು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಹಿಮಾಂಶಿ ನರ್ವಾಲ್, ತನ್ನ ಪತಿ, ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಮೃತದೇಹದ ಪಕ್ಕದಲ್ಲಿ ಕುಳಿತು ಕಣ್ಣೀರಿಟ್ಟಿದ್ದ ಚಿತ್ರ ಎಲ್ಲರ ಮನ ಕಲಕಿತ್ತು. ಕೆಲವು ದಿನಗಳ ನಂತರ ಹಿಮಾಂಶಿ ಪತಿಗೆ ಗೌರವ ಸಲ್ಲಿಸುವ ವೇಳೆ ಕಾಣಿಸಿಕೊಂಡಿದ್ದರು. ಪಹಲ್ಗಾಮ್‌ನಲ್ಲಿದ್ದಾಗ ಆಕೆಯ ಹಣೆಯ ಮೇಲಿದ್ದ ಸಿಂಧೂರ ಈ ಸಮಯದಲ್ಲಿ ಇರಲಿಲ್ಲ.
ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ರಾತ್ರೋ ರಾತ್ರಿ ನಡೆಸಿದ 23 ನಿಮಿಷಗಳ ದಾಳಿಯಲ್ಲಿ ಸುಮಾರು 100 ಉಗ್ರರು ಹತರಾಗಿದ್ದಾರೆ. 12 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ. ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಆಪರೇಷನ್ ಸಿಂಧೂರ್ ನ ಗುರಿ ಭಯೋತ್ಪಾದಕ ಅಡಗು ತಾಣಗಳನ್ನು ಗುರಿಯಾಗಿಸಿಕೊಳ್ಳುವುದು ಮಾತ್ರ ಎಂದು ಹೇಳಿದೆ. ಈ ದಾಳಿಯು ನೆರೆಯ ದೇಶದೊಂದಿಗೆ ಹೋರಾಡುವ ಗುರಿಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಹಲ್ಗಾಂ ದಾಳಿಯ ಬಳಿಕ ಭಾರತ ಮತ್ತು ಪಾಕ್ ಸಂಬಂಧ ತೀವ್ರ ಹದಗೆಟ್ಟು, ಉದ್ವಿಗ್ನತೆಯು ಯುದ್ಧದ ಹಂತಕ್ಕೆ ಬಂದು ತಲುಪಿದೆ. ಉಭಯ ದೇಶಗಳ ಮಧ್ಯೆ ವ್ಯಾಪಾರ, ವಹಿವಾಟು, ಸಾರಿಗೆ ಸ್ಥಗಿತಗೊಂಡಿದೆ.