ನಾಡಹಬ್ಬ ದಸರಾ ಸರ್ಕಾರಿ ಕಾರ್ಯಕ್ರಮ, ಈ ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಕುಟುಂಬದವರು ಭಾಗಿಯಾಗಿರುವ ಕಾರಣಕ್ಕೆ ಕಾಂಗ್ರೆಸ್ ಹೈ ಕಮಾಂಡ್‌ಗೆ ದೂರು ಸಲ್ಲಿಕೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮೈಸೂರಿನಲ್ಲಿ ಸಿಎಂ ಹಾಗೂ ಡಿಸಿಎಂ ತೆರೆದ ಜೀಪ್‌ನಲ್ಲಿ ಗುರುವಾರ ಪರೇಡ್ ಮಾಡಿದ್ದರು, ಇದು ಸರ್ಕಾರಿ ಕಾರ್ಯಕ್ರಮ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ನಿಂತಿದ್ದ ತೆರೆದ ಜೀಪ್‌ನಲ್ಲಿ ಗ್ಲಾಸ್ ಧರಿಸಿ ಅವರ ಹಿಂದೆ ನಿಂತಿದ್ದ ಪುಟ್ಟ ಬಾಲಕ ಯಾರೆಂಬುದರ ಬಗ್ಗೆ ಹೈ ಕಮಾಂಡ್ ಮಾಹಿತಿ ಕೇಳಿದೆ.
ಮೈಸೂರಿನ ಅರಮನೆ ಮುಂದೆ ನಂದಿ ಧ್ವಜ ಪೂಜೆ ಬಳಿಕ ತೆರೆದ ಜೀಪಿನಲ್ಲಿ ಸಿಎಂ ಮತ್ತು ಡಿಸಿಎಂ ಪರೇಡ್ ಮಾಡಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರ ಜೊತೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕ ತನ್ವೀರ್ ಸೇಠ್ ಕೂಡ ಜೀಪ್‌ನಲ್ಲಿದ್ದರು. ಎಲ್ಲರೂ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳಾಗಿ ಈ ಸರ್ಕಾರಿ ಕಾರ್ಯಕ್ರಮದ ಭಾಗವಾಗಿದ್ದರು.
ಇವರೆಲ್ಲರ ನಡುವೆ ತೆರೆದ ಜೀಪ್‌ನಲ್ಲಿ ಒಬ್ಬ ಬಾಲಕ ಕಾಣಿಸಿಕೊಂಡಿರುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಮಾಹಿತಿ ಕೇಳಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ, ಸಚಿವರ ಪರೇಡ್ ಸಾಮಾನ್ಯ. ಇದರಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಹೇಗೆ, ಏಕೆ, ಭಾಗಿಯಾಗಿದ್ದ ಬಾಲಕ ಯಾರು ಎಂದು ಹೈಕಮಾಂಡ್ ಪ್ರಶ್ನಿಸಿದೆ.
ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದವರು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೆ, ಪೊಲೀಸರು ಹಾಗೂ ಜನರಿಂದ ಗೌರವ ರಕ್ಷೆ ಪಡೆದಿದ್ದು ಯಾಕೆ ಎನ್ನುವ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದ್ದು, ವಿವಾಕ್ಕೆ ಕಾರಣವಾಗಿದೆ.