ಅನ್ಯಾಯದ ವಿರುದ್ಧ ಸದಾ ಎದ್ದುನಿಂತ ಪಾಟ್ನಾ ಭೂಮಿಯಲ್ಲಿ ಇಂದು ನಿಮ್ಮ ಮುಂದೆ ನಿಂತಿದ್ದೇನೆ. ನಮ್ಮ ಪ್ರಜಾಪ್ರಭುತ್ವವೇ ಅಪಾಯದಲ್ಲಿರುವ ಸಂದರ್ಭದಲ್ಲಿ ಇಂದಿನ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಬಹಳ ಮಹತ್ವ ಪಡೆದಿದೆ. ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮತ್ತು ನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ, ಮತ್ತು ಅವರ ಸಿದ್ಧಾಂತದ ಗುರುಗಳಾದ RSS ಹತ್ತಿಕ್ಕುತ್ತಿವೆ. ಭಾರತವು ಇಂದು ಆತ್ಮವಂಚನೆಯ ನೆರಳಿನಲ್ಲಿ ಬದುಕುತ್ತಿದೆ. ಸಂಸ್ಥೆಗಳನ್ನು ವಶಪಡಿಸಿಕೊಂಡು,ಸ್ವಾತಂತ್ರ್ಯವನ್ನು ಕಡಿತಗೊಳಿಸಲಾಗುತ್ತಿದ್ದು, ಜನರ ಜನಾದೇಶವನ್ನು ಕದಿಯಲಾಗುತ್ತಿದೆ. ಇಲ್ಲಿನ “ಡಬಲ್ ಇಂಜಿನ್ ಸರ್ಕಾರ” ಎಂಬುದು ನಮ್ಮ ಪ್ರಜಾರಾಜ್ಯದ ಆತ್ಮವನ್ನೇ ಘಾಸಿಗೊಳಿಸುವಂತಹ ಎರಡು ಅಲುಗುಗಳ ಕತ್ತಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಹಾರದ ಪಟನಾದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಿಎಂ, ಚುನಾವಣೆಗಳನ್ನು ಕದಿಯುವ ಮೂಲಕ ಬಿಜೆಪಿಯು, ದೇಶಾದ್ಯಂತ ‘ವೋಟ್ ಚೋರಿ’ಯಲ್ಲಿ ತೊಡಗಿಕೊಂಡಿದೆ. ಶಾಸಕರನ್ನು ಖರೀದಿಸುವುದು ಮತ್ತು ಜನರ ಧ್ವನಿಯನ್ನು ಹತ್ತಿಕ್ಕುವುದು ಇವರ ಕೆಲಸ. ಕರ್ನಾಟಕದ ಮಹದೇವಪುರ ಇರಲಿ ಅಥವಾ ಆಳಂದ ಇರಲಿ, ‘ವೋಟ್ ಚೋರಿ’ಯನ್ನು ರಾಹುಲ್ ಗಾಂಧಿಯವರು ಬಹಿರಂಗಪಡಿಸಿದರು. ಚುನಾವಣಾ ಅಕ್ರಮಗಳ ವಿರುದ್ಧದ ಅವರ ಅವಿರತ ಹೋರಾಟವು ನ್ಯಾಯಯುತ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ ನೀಡಿದೆ. ಇತ್ತೀಚೆಗೆ ಬಿಹಾರದಲ್ಲಿ ಕಾಣಲಾಗುತ್ತಿರುವ ‘ಸಿಐಆರ್’ (SIR) ದುರಂತವು,ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕೆ ಇಳಿಯುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ದೇಶೀಯವಾಗಿ ಕುಂಠಿತವಾಗುತ್ತಿರುವ ಸಂದರ್ಭದಲ್ಲಿ, ಮೋದಿ ಸರ್ಕಾರವು ವಿದೇಶಾಂಗ ನೀತಿಯಲ್ಲಿ ವಿಫಲವಾಗಿದೆ. ಒಮ್ಮೆ ಜಾಗತಿಕವಾಗಿ ಗೌರವಿಸಲ್ಪಟ್ಟ ಭಾರತದ ವಿದೇಶಾಂಗ ನೀತಿ, ಇಂದು ಮೌನ ಮತ್ತು ಅಧೀನ ಸ್ಥಿತಿಗೆ ಕುಸಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ನಾನು ಮಾಡಿದ್ದಾಗಿ ನಾಚಿಕೆಯಿಲ್ಲದೆ ಹೇಳಿಕೊಂಡಾಗ, ಮೋದಿ ಒಂದೂ ಮಾತೂ ಆಡಲಿಲ್ಲ. ಇದು ರಾಜತಾಂತ್ರಿಕತೆ ಅಲ್ಲ. ಇದು ನಮ್ಮ ಸಾರ್ವಭೌಮತ್ವ ದೊಂದಿಗೆ ಮಾಡಿಕೊಂಡ ರಾಜಿ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
ಇಂತಹ ವಿಫಲ ಅಂತಾರಾಷ್ಟ್ರೀಯ ಸಂಬಂಧಗಳು ನಮ್ಮ ಮಿತ್ರರನ್ನು ಶತ್ರುಗಳನ್ನಾಗಿ ಮಾಡುತ್ತಿವೆ ಮತ್ತು ನಮ್ಮ ದೇಶವನ್ನು ಅಸ್ಥಿರಗೊಳಿಸಲು ಶತ್ರುಗಳನ್ನು ಒಗ್ಗೂಡಿಸುತ್ತಿವೆ. ಉದ್ಯೋಗಾವಕಾಶಗಳು ಮತ್ತು ವ್ಯಾಪಾರದ ನಷ್ಟ ಮತ್ತು ಮಿತ್ರರನ್ನು ಕಳೆದುಕೊಂಡಿರುವುದಕ್ಕೆ ಮೋದಿಯವರೇ ನೇರ ಹೊಣೆಗಾರರು. ಬಿಜೆಪಿಯ ಆಡಳಿತದಲ್ಲಿ ಸಾಮಾನ್ಯ ಭಾರತೀಯರು ನಲುಗಿ ಹೋಗಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ನಿರುದ್ಯೋಗ ನಮ್ಮ ಯುವಕರ ಬೆನ್ನೆಲುಬನ್ನು ಮುರಿದಿದೆ. ಅಸಮಾನತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಮೋದಿಯವರ ಸರ್ಕಾರದಿಂದ,ಭಾರತದಲ್ಲಿ ಬಿಲಿಯನೇರ್ಗಳು ಪ್ರಗತಿ ಹೊಂದುತ್ತಿದ್ದು, ಬಡವರು ಎರಡು ಹೊತ್ತಿನ ಊಟಕ್ಕಾಗಿ ಡುತ್ತಿರುಪರದಾಡುತ್ತಿರುವವ ದೇಶವನ್ನಾಗಿ ಮಾಡಿದೆ ಎಂದರು.
ಈ ಕತ್ತಲಿನಲ್ಲಿ ಕಾಂಗ್ರೆಸ್ ಆಶಾಕಿರಣವಾಗಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಿರ್ಭೀತ ಧ್ವನಿಯು ದೋಷಪೂರಿತ ಜಿಎಸ್ಟಿ (GST) ವ್ಯವಸ್ಥೆಯನ್ನು ಸತತವಾಗಿ ಬಯಲಿಗೆಳೆದಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳು ಕೂಡ ದೋಷಪೂರಿತ ಜಿಎಸ್ಟಿ ವ್ಯವಸ್ಥೆಯನ್ನು ಸುಧಾರಿಸಲು ನಿರಂತರವಾಗಿ ಒತ್ತಾಯಿಸಿದ್ದವು. ಅಂತಹ ತಿದ್ದುಪಡಿಯಿಂದ ಸುಮಾರು 70% ಆದಾಯ ನಷ್ಟವು ತಮ್ಮ ಹೆಗಲ ಮೇಲೆ ಬೀಳುತ್ತದೆ ಎಂಬುದು ತಿಳಿದಿದ್ದರೂ, ನಾವು ಸ್ಥಿರವಾಗಿ ನಿಂತೆವು, ನಮ್ಮ ಜನರನ್ನು ಅನ್ಯಾಯದ ವ್ಯವಸ್ಥೆಯಿಂದ ರಕ್ಷಿಸುವ ಉದ್ದೇಶದಿಂದ ನಾವೆಲ್ಲಾ ಒಗ್ಗಟ್ಟಾಗಿ ನಿಂತೆವು. ಆದಾಗ್ಯೂ ಮೋದಿಯವರು, ಎಂಟು ವರ್ಷಗಳ ಕಾಲ ಸಾಮಾನ್ಯ ಭಾರತೀಯರ ಪ್ರತಿಯೊಂದು ಹನಿ ಬೆವರು ಮತ್ತು ಹಣವನ್ನು ಹಿಂಡುತ್ತಲೇ ಇದ್ದರು. ಅಂತಿಮವಾಗಿ ಅವರು ಜಿಎಸ್ಟಿಯನ್ನು ಸುಧಾರಿಸಲೇಬೇಕಾಯಿತು, ಆದರೆ ಆಗಲೂ ಅವರು ಸೆಸ್ಗಳ ಮೂಲಕ ಕೇಂದ್ರ ಸರ್ಕಾರದ ಬೊಕ್ಕಸವನ್ನು ತುಂಬಲು ಒಂದು ಮಾರ್ಗವನ್ನು ಕಂಡುಕೊಂಡರು ಎಂದು ಸಿಎಂ ಹೇಳಿದರು.
ಮೋದಿಯವರು ವೈಫಲ್ಯತೆಯನ್ನು ವಿಜಯವಾಗಿ ಮೆರೆಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರ ಸರ್ಕಾರ ಎಡವಿದಾಗಲೆಲ್ಲ, ಅದನ್ನು ಒಂದು ಸಾಧನೆಯಂತೆ ಬಿಂಬಿಸುತ್ತಾರೆ. ಅವರು ಕಾಂಗ್ರೆಸ್ ಸರ್ಕಾರಗಳ ಕಠಿಣ ಪರಿಶ್ರಮ ಮತ್ತು ನಮ್ಮ ರಾಜ್ಯಗಳ ಅವಿರತ ಪ್ರಯತ್ನಗಳಿಗೆ ನಿರ್ಲಜ್ಜವಾಗಿ ತಾವೇ ಶ್ರೇಯ ಪಡೆಯುತ್ತಾರೆ. ಆದರೆ ಅವರ ದಾಖಲೆಯೇ ನಿರೂಪಿಸುವಂತೆ, ಅವರ ಪೊಳ್ಳು ಭರವಸೆಗಳು ಹಾಗೂ ಖಾಲಿ ಘೋಷಣೆಗಳು ಬಯಲಾಗಿವೆ. ಪ್ರತಿಯೊಬ್ಬ ಭಾರತೀಯನಿಗೂ ನ್ಯಾಯಯುತ ಪ್ರಾತಿನಿಧ್ಯವನ್ನು ಖಚಿತಪಡಿಸಲು ಕೇಂದ್ರ ಸರ್ಕಾರವು ಜಾತಿಗಣತಿಯನ್ನು ಕೈಗೊಳ್ಳಬೇಕೆಂಬುದು ಕಾಂಗ್ರೆಸ್‌ನ ನಿರಂತರ ಬೇಡಿಕೆಯಾಗಿತ್ತು. ಕರ್ನಾಟಕದಲ್ಲಿ ನಾವು ಮೊದಲು ಜಾರಿಗೆ ತಂದ ‘ಗ್ಯಾರಂಟಿ’ ಯೋಜನೆಗಳನ್ನು ಇಂದು ಬಿಜೆಪಿ ಆಡಳಿತದ ರಾಜ್ಯಗಳು ಕೂಡ ನಿರ್ಲಜ್ಜವಾಗಿ ನಕಲು ಮಾಡುತ್ತಿರುವುದನ್ನು ನಾವು ಮರೆಯಬಾರದು, ಹಿಂದೆ ನಮ್ಮನ್ನು ಅಪಹಾಸ್ಯ ಮಾಡಿದವರು , ಇಂದು ನಮ್ಮ ಅನುಕರಿಸುತ್ತಿದ್ದಾರೆ. ಜನರು ನಮ್ಮ ಆಡಳಿತದ ಮಾದರಿಯನ್ನು ನಂಬುತ್ತಾರೆ ಎಂಬುದು ಅವರಿಗೆ ತಿಳಿದಿದೆ ಎಂದರು.
ಇದು ಕಾಂಗ್ರೆಸ್‌ನ ಶಕ್ತಿ. ಇದು ಸತ್ಯದ ಶಕ್ತಿ. ನಮ್ಮ ಹಕ್ಕುಗಳನ್ನು ರಕ್ಷಿಸಲು, ಪ್ರಜಾಪ್ರಭುತ್ವವನ್ನು ಕಾಪಾಡಲು, ನ್ಯಾಯವನ್ನು ಎತ್ತಿಹಿಡಿಯಲು ಕಾಂಗ್ರೆಸ್ ಮಾತ್ರ ಶಕ್ತವಾಗಿದೆ ಎಂಬುದನ್ನು ಜನರು ಅರಿತಿದ್ದಾರೆ. ನಾವು ಕೇವಲ ಚುನಾವಣೆಗಾಗಿ ಹೋರಾಡುತ್ತಿಲ್ಲ. ನಾವು ಭಾರತವನ್ನು ಉಳಿಸಲು ಹೋರಾಡುತ್ತಿದ್ದೇವೆ. ಬಿಜೆಪಿ-ಆರ್ಎಸ್ಎಸ್ ಒಕ್ಕೂಟವು ಈ ದೇಶದ ಆತ್ಮವನ್ನು ಅಳಿಸಿಹಾಕಲು ಬಯಸಿದೆ, ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಇಂದು ಪಾಟ್ನಾದಿಂದ, ಶ್ರೀ ಮಲ್ಲಿಕಾರ್ಜುನ ಖರ್ಗೆ ಜೀ ಮತ್ತು ಶ್ರೀ ರಾಹುಲ್ ಗಾಂಧಿ ಜೀ ಅವರ ನಾಯಕತ್ವದಲ್ಲಿ, ಪ್ರಜಾಪ್ರಭುತ್ವ ಮರುಸ್ಥಾಪನೆಯಾಗುವವರೆಗೂ, ನ್ಯಾಯ ದೊರಕುವವರೆಗೂ, ಜನರ ಧ್ವನಿಯನ್ನು ಆಲಿಸುವವರೆಗೂ ಕಾಂಗ್ರೆಸ್ ವಿಶ್ರಮಿಸುವುದಿಲ್ಲ ಎಂಬ ಸಂದೇಶವನ್ನು ಇಡೀ ಭಾರತಕ್ಕೆ ತಿಳಿಸೋಣ. ನಾವು ಧೈರ್ಯದಿಂದ, ಒಗ್ಗಟ್ಟಿನಿಂದ ಮತ್ತು ಭಾರತದ ಜನರ ಮೇಲಿನ ಅಚಲ ವಿಶ್ವಾಸದಿಂದ ಮುನ್ನಡೆಯುತ್ತೇವೆ. ಸತ್ಯವು ಯಾವಾಗಲೂ ಜಯಶಾಲಿಯಾಗಲಿದೆ ಹಾಗೂ ಭವಿಷ್ಯವು ಭಾರತೀಯರ ಪಾಲಿಗೆ ಒಲಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.