ಟೆಲಿಗ್ರಾಮ್ ಮೂಲಕ ಆನ್‌ಲೈನ್ ಪಾರ್ಟ್ ಟೈಮ್ ಕೆಲಸ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಕಾರವಾರದ ಸೈಬರ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮುಂಡಗೋಡ ತಾಲೂಕಿನ ಮಳಗಿ ನಿವಾಸಿ ಅಕ್ಷಯ ಸುರೇಶ ರೇವಣಕರ (33) ವಂಚನೆಗೊಳಗಾದ ವ್ಯಕ್ತಿ.
ಅಕ್ಷಯ ಸುರೇಶ ರೇವಣಕರ ಟೆಲಿಗ್ರಾಮ್ ಬಳಸುತ್ತಿದ್ದಾಗ, ‘Nisha Mehta’ ಎಂಬ ಐಡಿಯಿಂದ ಪಾರ್ಟ್ ಟೈಮ್ ಕೆಲಸದ ಜಾಹೀರಾತು ಬಂದಿತ್ತು. ಅದನ್ನು ಕ್ಲಿಕ್ ಮಾಡಿದಾಗ ಅವರು ‘Task 3 Bajaj VIP’ ಎಂಬ ಗ್ರೂಪ್‌ಗೆ ಸೇರ್ಪಡೆಯಾಗಿದ್ದರು. ಈ ಗ್ರೂಪ್‌ನ ಅಡ್ಮಿನ್ ಆಗಿದ್ದ ‘Suresh Malhotra’ ಎಂಬ ವ್ಯಕ್ತಿಯು ಕೆಲಸದ ಬಗ್ಗೆ ಮಾಹಿತಿ ನೀಡಿ ಒಂದು ವೆಬ್‌ಸೈಟ್ ಲಿಂಕ್ ಕಳುಹಿಸಿದ್ದನು. ಅದರಲ್ಲಿ ವಿವಿಧ ಕಂಪನಿಗಳ ಉತ್ಪನ್ನಗಳಿಗೆ ರೇಟಿಂಗ್ ಮತ್ತು ರಿವ್ಯೂ ನೀಡುವ ಕೆಲಸವನ್ನು ಅಕ್ಷಯ ಅವರಿಗೆ ನೀಡಲಾಗಿತ್ತು.
ನಂತರ ‘Sizzle’ ಎಂಬ ಹೆಸರಿನ ಮತ್ತೊಂದು ವೆಬ್‌ಸೈಟ್ ಮೂಲಕ ರಿವ್ಯೂ ನೀಡುವ ಕೆಲಸ ಮುಂದುವರಿಸಿದಾಗ, ಅಕ್ಷಯ ಅವರ ಖಾತೆಗೆ ಲಾಭಾಂಶದ ರೂಪದಲ್ಲಿ 500 ರೂಪಾಯಿ ಜಮಾ ಆಗಿತ್ತು. ಇದರಿಂದ ನಂಬಿಕೆ ಬಂದ ಅಕ್ಷಯ ಅವರಿಗೆ, ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಆರೋಪಿಗಳು ನಂಬಿಸಿದ್ದರು. ಇದನ್ನು ನಂಬಿ ಮೊದಲು 700 ರೂಪಾಯಿ ಹೂಡಿಕೆ ಮಾಡಿದಾಗ ಅವರಿಗೆ 920 ರೂಪಾಯಿ ವಾಪಸ್ ಬಂದಿದೆ ಇದನ್ನು ನಂಬಿ ಹೆಚ್ಚಿನ ಲಾಭದ ಆಸೆಗೆ ಬಿದ್ದ ಅಕ್ಷಯ 01-01-2026 ರಿಂದ 02-01-2026 ರ ಅವಧಿಯಲ್ಲಿ ಬ್ಯಾಂಕ್ ಖಾತೆಗಳಿಗೆ ಒಟ್ಟು 1,57,800 ರೂಪಾಯಿ ಜಮಾ ಮಾಡಿದ್ದಾರೆ.
ಹಣ ಪಾವತಿಸಿದ ನಂತರ ಆರೋಪಿಗಳು ಅಕ್ಷಯ ಅವರಿಗೆ ಯಾವುದೇ ಲಾಭಾಂಶವನ್ನಾಗಲಿ ಅಥವಾ ಅವರು ಹೂಡಿಕೆ ಮಾಡಿದ ಅಸಲು ಹಣವನ್ನಾಗಲಿ ಮರಳಿ ನೀಡದೆ ವಂಚಿಸಿದ್ದಾರೆ. ತಾನು ಮೋಸ ಹೋಗಿರುವುದು ತಿಳಿದುಬಂದ ಬಳಿಕ ಅವರು ಕಾರವಾರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


