ಆನ್ಲೈನ್ ಹೂಡಿಕೆ ವಂಚನೆ ಜಾಲಕ್ಕೆ ಸಿಲುಕಿದ ಬಾಗಲಕೋಟೆಯ ವ್ಯಾಪಾರಿಯೊಬ್ಬರು 1.09 ಕೋಟಿ ರೂ. ಕಳೆದುಕೊಂಡಿರುವುದು ಬಹಿರಂಗಗೊಂಡಿದೆ. ಆಸ್ತಾ ಟ್ರೇಡ್ 903 ಸ್ಟ್ರಾಟಜಿ ಹಬ್ ಎಂಬ ಹೆಸರಿನ ನಕಲಿ ಆನ್ಲೈನ್ ಗ್ರೂಪ್ ಮೂಲಕ ಅಂತಾರಾಜ್ಯ ಆನ್‌ಲೈನ್ ವಂಚಕರು ವ್ಯಾಪಾರಿಗೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂಬ ಆಮಿಷವೊಡ್ಡಿ ಹಣ ದೋಚಿದ್ದಾರೆ.
ನಕಲಿ ಇನ್ವೆಸ್ಟ್‌ಮೆಂಟ್ ಮಾರ್ಕೆಟ್ ಮೂಲಕ ಬಾಗಲಕೋಟೆ ಮೂಲದ ವ್ಯಾಪಾರಿಗಯನ್ನು ಆಗಸ್ಟ್ 12 ರಂದು ಸಂಪರ್ಕಿಸಿದ್ದ ವಂಚಕರು, ಮೊದಲು ಗ್ರೂಪ್‌ಗೆ ಸೇರಿಸಿಕೊಂಡಿದ್ದರು. ಬಳಿಕ ಚಿಕ್ಕ ಮೊತ್ತದ ಹೂಡಿಕೆ ಮಾಡಲು ಪ್ರೇರೇಪಿಸಿ ಲಾಭ ತೋರಿಸಿ ಹಂತ ಹಂತವಾಗಿ ಕೋಟಿ ರೂಪಾಯಿಗೂ ಹೆಚ್ಚಿನ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 27ರವರೆಗೆ ನಡೆದ ವಹಿವಾಟಿನಲ್ಲಿ ವ್ಯಾಪಾರಿಯಿಂದ 1,09,05,800 ರೂಪಾಯಿ ಕಿತ್ತುಕೊಂಡಿದ್ದು, 5 ಲಕ್ಷ ರೂ. ಮಾತ್ರ ಹಿಂದಿರುಗಿಕ ಗ್ರೂಪ್ ಡಿಲಿಟ್ ಮಾಡಿದ್ದಾರೆ.
ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಂಚಕರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಬಾಗಲಕೋಟೆ ಎಸ್‌ಪಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.
ನಕಲಿ ಇನ್ವೆಸ್ಟ್‌ಮೆಂಟ್ ಆ್ಯಪ್‌ಗಳು, ಟ್ರೇಡಿಂಗ್ ಗ್ರೂಪ್‌ಗಳು, ಬ್ಯಾಂಕ್ OTP, KYC ಅಪ್ಡೇಟ್, ಫೇಕ್ ಲಿಂಕ್, ಡಿಜಿಟಲ್ ಅರೆಸ್ಟ್ ಇತ್ಯಾದಿ ಮೂಲಕ ನಾಗರಿಕರ ಹಣ ದೋಚುವ ಪ್ರಕರಣಗಳು ವರದಿಯಾಗುತ್ತಿವೆ. ಅಪರಿಚಿತ ಲಿಂಕ್‌ಗಳನ್ನು ತೆರೆಯದಂತೆ, ಅಪರಿಚಿತರನ್ನು ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಂಡ ವ್ಯವಹಾರಗಳನ್ನು ನಡೆಸದಂತೆ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


