ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮತ್ತು ಸಹಚರರು ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಮೂಲಕ ಅಲ್ಪಾವಧಿಯಲ್ಲಿ 2000 ಕೋಟಿ ರೂಪಾಯಿ ಲಾಭ ಗಳಿಸಿರುವ ಆರೋಪವಿದ್ದು, ಈ ಹಣವನ್ನು 262 ಮ್ಯೂಲ್ ಖಾತೆಗಳ ಮೂಲಕ ಸಂಗ್ರಹಿಸಲಾಗಿದೆ ಎಂದು ಇಡಿ ಹೇಳಿದೆ.
ಈ ಕಂಪನಿಗಳು ಕಾಲ್‌ಸೆಂಟರ್‌ಗಳ ಮೂಲಕ ಗೇಮಿಂಗ್ ವ್ಯವಹಾರವನ್ನು ನಿರ್ವಹಿಸುತ್ತಿದ್ದವು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ವ್ಯವಹಾರದ ಆರೋಪದ ಮೇಲೆ ಬಂಧಿತ ವೀರೇಂದ್ರ ಪಪ್ಪಿ ವಿರುದ್ಧ ಇಡಿ ನಡೆಸಿದ ತನಿಖೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲ ಪತ್ತೆಯಾಗಿದೆ.
ಇಡಿ ಅಧಿಕಾರಿಗಳು ಚಳ್ಳಕೆರೆ ಮತ್ತು ಬೆಂಗಳೂರಿನಲ್ಲಿ ವೀರೇಂದ್ರ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಒಟ್ಟು 55 ಕೋಟಿ ರೂಪಾಯಿ ಫ್ರೀಝ್ ಮಾಡಿದ್ದಾರೆ. ಐದು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ವೀರೇಂದ್ರ ಅವರ ಸಹೋದರರಾದ ಕೆ.ಸಿ. ತಿಪ್ಪೇಸ್ವಾಮಿ ಸೇರಿದಂತೆ ಡೈಮೆಂಡ್ ಸಾಫ್ಟ್ ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್, ಮತ್ತು ಪ್ರೈಮ್ 9 ಟೆಕ್ನಾಲಜೀಸ್ ಎಂಬ ಮೂರು ಕಂಪನಿಗಳು ದುಬೈನಿಂದ ಕಾರ್ಯನಿರ್ವಹಿಸುತ್ತಿದ್ದವು ಎಂಬ ಸಂಗತಿ ಹೊರ ಬಂದಿದೆ.
ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳಿಗೆ ಇಡಿ ಅಧಿಕಾರಿಗಳು ಭೇಟಿ ನೀಡಿ, ವೀರೇಂದ್ರ ಮತ್ತು ಕುಟುಂಬ ಸದಸ್ಯರ ಹಣಕಾಸು ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ವೀರೇಂದ್ರ ಪಪ್ಪಿಯ ಇಡಿ ಕಸ್ಟಡಿ ಅಂತ್ಯಗೊಂಡಿದ್ದು, ಇಡಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ಕಸ್ಟಡಿಗೆ ಕೇಳದಿದ್ದರೆ, ನ್ಯಾಯಾಂಗ ಬಂಧನಕ್ಕೆ ಕೇಳಲು ಇಡಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.


