ಬೆಂಗಳೂರು: ಭಾರತದಾದ್ಯಂತ ಒಂದೇ ಹಂತದಲ್ಲಿ ಚುನಾವಣೆ ನಡೆದರೆ ಹಣಕಾಸಿನ ವೆಚ್ಚ ಕಡಿಮೆಯಾಗಲಿದೆ. ಇದು ರಾಷ್ಟ್ರದ ಅಭಿವೃದ್ಧಿಗೂ ಪೂರಕವಾಗಲಿದೆ ಎಂದು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ನಗರದ ಎಫ್‍ಕೆಸಿಸಿಐ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಶುಕ್ರವಾರ ಆಯೋಜಿಸಿದ್ದ ‘ಒಂದು ದೇಶ ಒಂದು ಚುನಾವಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದಿನ ಮಾನ್ಯ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅವರು ನೀಡಿದ ವರದಿಯ ಬಳಿಕ ಒಂದೇ ಚುನಾವಣೆಯ ವಿಚಾರ ಹೆಚ್ಚು ಚರ್ಚೆಗೆ ಒಳಪಟ್ಟಿದೆ ಎಂದು ನುಡಿದರು.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆದು, ಇದಾದ ಬಳಿಕ ಸ್ಥಳೀಯ ಸಂಸ್ಥೆಯ ಚುನಾವಣೆಗಳೂ ನಡೆದರೆ ಚುನಾವಣೆಗೆ ಆಗುವ ಹಣಕಾಸಿನ ಖರ್ಚು ಕಡಿಮೆಯಾಗಲಿದೆ. ಇದರಿಂದ ಅದೇ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಸಾಧ್ಯವಿದೆ. ಇದರಿಂದ ಅಭಿವೃದ್ಧಿಗೆ ಹೆಚ್ಚಿನ ಹಣ ತೊಡಗಿಸಬಹುದು ಎಂದು ವಿಶ್ಲೇಷಿಸಿದರು.
‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆ ನಮ್ಮ ದೇಶಕ್ಕೆ ಹೊಸದೇನೂ ಅಲ್ಲ; 1952, 1957, 1962, 1967ರಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದವು ಎಂದು ಅವರು ತಿಳಿಸಿದರು. ಆದ್ದರಿಂದ, ಇದರ ವಿರೋಧ ಸರಿಯಲ್ಲ ಎಂದರು.
ದೇಶದಲ್ಲಿ ನಿರಂತರವಾಗಿ ಚುನಾವಣೆ ನಡೆಯುತ್ತಿದ್ದರೆ, ಎಲ್ಲರೂ ಚುನಾವಣೆ ಕೆಲಸದಲ್ಲೇ ನಿರತರಾಗಿರುವ ಸ್ಥಿತಿ ಇರುತ್ತದೆ. ಇದರಿಂದ ದೇಶದ ಪ್ರಗತಿಗೆ ಹಿನ್ನಡೆಯಾಗುತ್ತದೆ. ಅದಷ್ಟು ಬೇಗ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆ ಜಾರಿಯಾಗಬೇಕು ಎಂದು ವೆಂಕಯ್ಯ ನಾಯ್ಡು ಅವರು ತಿಳಿಸಿದರು.
‘ಒಂದು ದೇಶ ಒಂದು ಚುನಾವಣೆ’ ಕುರಿತು ಈಗಾಗಲೇ ನೀತಿ ಆಯೋಗ, ಕಾನೂನು ಆಯೋಗ, ಚುನಾವಣಾ ಆಯೋಗಗಳು ಶಿಫಾರಸು ಮಾಡಿವೆ. ಈ ಬಗ್ಗೆ ತ್ವರಿತವಾಗಿ ಜನಾಭಿಪ್ರಾಯ ಸಂಗ್ರಹಿಸಿ, ಚರ್ಚೆಗೊಳಪಡಿಸಿ ನಂತರ ಜಾರಿಯಾಗಲಿ ಎಂದು ಆಶಿಸಿದರು.
ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಈ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ, ಪ್ರಮುಖರು ಪಾಲ್ಗೊಂಡಿದ್ದರು.