ಒಂದು ದೇಶ ಒಂದು ಚುನಾವಣೆ ಮಸೂದೆಯ ನಾನಾ ಅಂಶಗಳ ಬಗ್ಗೆ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಸ್ವರೂಪದ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಚರ್ಚಿಸಲು ಜಂಟಿ ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಜೆ.ಎಸ್. ಖೇಹರ್ ಅದರಲ್ಲಿರುವ ನಿಬಂಧನೆಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ.
ಈ ಮಸೂದೆಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಒಪ್ಪಿಕೊಂಡರೂ, ಚುನಾವಣಾ ಆಯೋಗಕ್ಕೆ ನೀಡಲಾಗಿರುವ ಅತಿಯಾದ ಅಧಿಕಾರಗಳ ಕುರಿತು ಅವರು ಎಚ್ಚರಿಕೆ ನೀಡಿದ್ದಾರೆ. ಮಾಜಿ ಸಿಜೆಐ ಚಂದ್ರಚೂಡ್, ಮಸೂದೆಯ ೮೨ಎ(೩) ಮತ್ತು ೮೨ಎ(೫) ರಂತೆ ಚುನಾವಣಾ ಆಯೋಗಕ್ಕೆ ನೀಡಲಾಗಿರುವ “ಅತಿಯಾದ” ಅಧಿಕಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಅಧಿಕಾರಗಳು ಆಯೋಗಕ್ಕೆ ಸಂವಿಧಾನದ ಭಾಗ ೧೫ ಅನ್ನು ಮಾರ್ಪಡಿಸುವ ಅಥವಾ ರಾಜ್ಯ ವಿಧಾನಸಭೆಗಳ ಚುನಾವಣೆಯನ್ನು ಮುಂದೂಡುವ ಶಕ್ತಿಯನ್ನು ನೀಡುತ್ತವೆ, ಇದು ಸಂವಿಧಾನದ ಚೌಕಟ್ಟಿಗೆ ಸರಿಹೊಂದದಿರಬಹುದು. ಇತರ ಲೋಪಗಳು: ಚಂದ್ರಚೂಡ್ ಅವರು, ತುರ್ತು ಪರಿಸ್ಥಿತಿಯ ನಂತರ ಚುನಾವಣೆಯ ಚಕ್ರವನ್ನು ಸಮನ್ವಯಗೊಳಿಸಲು ರಾಜ್ಯ ವಿಧಾನಸಭೆಗಳ ಅವಧಿಯನ್ನು ವಿಸ್ತರಿಸುವ ಅಥವಾ ಕಡಿಮೆಗೊಳಿಸುವ ಸಂದರ್ಭಗಳ ಬಗ್ಗೆ ಮಸೂದೆಯಲ್ಲಿ ಸ್ಪಷ್ಟತೆಯ ಕೊರತೆ ಇದೆ ಎಂದು ಎತ್ತಿ ತೋರಿಸಿದ್ದಾರೆ.
ಚುನಾವಣಾ ಆಯೋಗವು ರಾಷ್ಟçಪತಿಗೆ ನೇರವಾಗಿ ಶಿಫಾರಸುಗಳನ್ನು ಮಾಡುವ ಬದಲು, ಚುನಾವಣೆಯ ವೇಳಾಪಟ್ಟಿಯನ್ನು ಸಂಸತ್ತು ಅಥವಾ ಕೇಂದ್ರ ಸಚಿವ ಸಂಪುಟವು ಅಂತಿಮಗೊಳಿಸಬೇಕು ಎಂದು ಇಬ್ಬರೂ ಸಲಹೆ ನೀಡಿದ್ದಾರೆ. ಪ್ರಾದೇಶಿಕ ಪಕ್ಷಗಳಿಗೆ ಪ್ರತಿಕೂಲ ಏಕಕಾಲ ಚುನಾವಣೆಗಳು ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಬಹುದು ಎಂಬ ಆತಂಕವನ್ನು ಚಂದ್ರಚೂಡ್ ಒಪ್ಪಿಕೊಂಡಿದ್ದಾರೆ. ಆದರೆ, ಇದಕ್ಕೆ ಚುನಾವಣೆಯ ಸಮಯಕ್ಕಿಂತ ಹೆಚ್ಚಾಗಿ, ಚುನಾವಣಾ ಧನಸಹಾಯದ ಅಸಮಾನತೆಯೇ ಕಾರಣ ಎಂದು ಅವರು ವಾದಿಸಿದ್ದಾರೆ. ಇದನ್ನು ಚುನಾವಣಾ ಧನಸಹಾಯ ಕಾನೂನುಗಳ ಸುಧಾರಣೆಯ ಮೂಲಕ ಪರಿಹರಿಸಬಹುದು ಎಂದೂ ಅವರು ಸಲಹೆ ನೀಡಿದ್ದಾರೆ.
ಸಂವಿಧಾನದ ಒಪ್ಪಿಗೆ: ಇಬ್ಬರೂ ಮಾಜಿ ಸಿಜೆಐಗಳು, ಏಕಕಾಲ ಚುನಾವಣೆಯ ಕಲ್ಪನೆಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 1950ರಿಂದ 1960ರವರೆಗೆ ಭಾರತದಲ್ಲಿ ಏಕಕಾಲಿಕ ಚುನಾವಣೆಗಳು ನಡೆಯುತ್ತಿದ್ದವು ಎಂದು ಚಂದ್ರಚೂಡ್ ಉಲ್ಲೇಖಿಸಿದ್ದಾರೆ. ಜೊತೆಗೆ, ಈ ವ್ಯವಸ್ಥೆಯು ಮತದಾರರ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಾದಿಸಿದ್ದಾರೆ. ಚುನಾವಣಾ ಆಯೋಗದ ಅಧಿಕಾರಗಳನ್ನು ಸೀಮಿತಗೊಳಿಸಿ, ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಬೇಕು. ತುರ್ತು ಪರಿಸ್ಥಿತಿಗಳಲ್ಲಿ ಚುನಾವಣೆಯ ವೇಳಾಪಟ್ಟಿಯನ್ನು ನಿರ್ಧರಿಸಲು ಸಂಸದೀಯ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸಬೇಕು. ಚುನಾವಣಾ ಧನಸಹಾಯ ಕಾನೂನುಗಳನ್ನು ಸುಧಾರಿಸಿ, ಪ್ರಾದೇಶಿಕ ಪಕ್ಷಗಳಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.