ಮಾಜಿ ಡಿಜಿ ಹಾಗೂ ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ ಸಂಬಂಧ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಅದೇ ದಿನ ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ಬಳಿಕ ಪಲ್ಲವಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮಗಳು ಕೃತಿಯ ವಿಚಾರಣೆಯನ್ನು ಆಕೆಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ಮುಂದೂಡಲಾಗಿತ್ತು. ಹೀಗಾಗಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿಮ್ಹಾನ್ಸ್ ಗೆ ಕಳುಹಿಸಿದ್ದ ಪೊಲೀಸರು ವೈದ್ಯಕೀಯ ವರಿದಿ ಕೇಳಿದ್ದರು. ತನಿಖೆಗೆ ಒಳಪಡಿಸಲು ಕೃತಿ ಮಾನಸಿಕವಾಗಿ ಫಿಟ್ ಇದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ಹೆಚ್ಎಸ್ಆರ್ ಲೇಔಟ್ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಲೆ ನಡದ ಮರುದಿನವೇ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದರು. ಬುಧವಾರ ಕೇಸ್ ಫೈಲ್ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದೆ. ಕೇಸ್ ಫೈಲ್ ಅನ್ನು ಹೊಸದಾಗಿ ಪ್ರಕರಣದ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಸಿಸಿಬಿಯ ಎಸಿಪಿ ಧರ್ಮೇಂದ್ರ ಪಡೆದುಕೊಂಡಿದ್ದಾರೆ.
ಓಂ ಪ್ರಕಾಶ್ ಮಗಳು ಕೃತಿಯನ್ನು ಬುಧವಾರ ಬೆಳಗ್ಗೆಯಿಂದಲೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಆಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಿದ್ದಾರೆ. ವಿಚಾರಣೆ ನಡೆಸಿ ಕೇಸ್ ಫೈಲ್ ಹಸ್ತಾಂತರ ಮಾಡುವ ಮೊದಲು ಆಕೆಯನ್ನು ಮನೆಗೆ ಕಳುಹಿಸಲಾಗಿದೆ. ಜೊತೆಗೆ ಸಿಸಿಬಿ ಅಧಿಕಾರಿಗಳು ಅವಶ್ಯಕತೆ ಇದ್ದಾಗ ನೋಟಿಸ್ ನೀಡಿ ಕೃತಿಯ ವಿಚಾರಣೆ ನಡೆಸಲು ತೀರ್ಮಾನ ಮಾಡಿದ್ದಾರೆ.
ಸಿಸಿಬಿ ಅಧಿಕಾರಿಗಳು ಜೈಲಿನಲ್ಲಿ ಇರುವ ಪಲ್ಲವಿಯನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಮುಕ್ತ ನ್ಯಾಯಾಲಯದಲ್ಲಿಯೇ ಪಲ್ಲವಿಯನ್ನು ಸಿಸಿಬಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.