Tuesday, December 23, 2025
Menu

ರೈತರಿಗೆ ವೃತ್ತಿ ಆಧಾರಿತ ಮೀಸಲಾತಿ ಅಗತ್ಯ: ಬಸವರಾಜ ಬೊಮ್ಮಾಯಿ

basavaraj bommai

ಕಲಬುರ್ಗಿ: ರೈತರಿಗೆ ವೃತ್ತಿ ಆಧಾರಿತ ಮೀಸಲಾತಿಯನ್ನು ತರುವ ವ್ಯವಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಆಗಬೇಕು. ಆಗ ಮಾತ್ರ ರೈತರ ಮಕ್ಕಳಿಗೆ ಉದ್ಯೋಗ ಸಿಗುತ್ತದೆ. ಇಲ್ಲದಿದ್ದರೆ ರೈತರ ಸಂಖ್ಯೆ ಕಡಿಮೆ ಆಗುತ್ತದೆ. ದೇಶದಲ್ಲಿ ರೈತ ಕೇಂದ್ರಿತ ಯೋಜನೆಗಳು ಬೇಕಿವೆ. ರೈತ ಬಲಿಷ್ಠವಾಗಿದ್ದರೆ ದೇಶ ಬಲಿಷ್ಠವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಕಲಬುರ್ಗಿಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಏರ್ಪಡಿಸಿದ್ದ ವಿಶ್ವ ರೈತ ದಿನ, ರೈತರ ಹಬ್ಬ ರಾಷ್ಟ್ರೀಯ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕೃಷಿ ಮತ್ತು ರೈತರ ಯೋಜನೆಗಳು ಮೊದಲ ಮೂರು ಪಂಚವಾರ್ಷಿಕ ಯೋಜನೆಯಲ್ಲಿ ಪ್ರಸ್ತಾಪವೇ ಆಗಿಲ್ಲ. ರೈತರನ್ನು ಬಿಟ್ಟು ದೇಶ ಕಟ್ಟಲು ಸಾಧ್ಯವಿಲ್ಲ, ರೈತರನ್ನು ಶಕ್ತಿ ಶಾಲಿ ಮಾಡಿದರೆ ದೇಶ ಶಕ್ತಿಶಾಲಿಯಾಗುತ್ತದೆ, ಬಹಳ ಜನರಿಗೆ ತಪ್ಪು ಕಲ್ಪನೆ ಇದೆ. ಯಾವ ದೇಶ ಆಹಾರದಲ್ಲಿ ಸ್ವಾವಲಂಬನೆ ಆಗಿರುತ್ತದೆ. ಆ ದೇಶ ಸ್ವಾಭಿಮಾನಿ ಆಗಿರುತ್ತದೆ. ಈಗ ದೇಶ ಸ್ವಾಭಿಮಾನಿಯಾಗಲು ಹಸಿರು ಕ್ರಾಂತಿ ಅದಕ್ಕೆ ರೈತ ಕಾರಣ. ಕೃಷಿ ಬೆಳೆಸಿದ ರೈತ ಬೆಳೆಯಲಿಲ್ಲ. ಇದಕ್ಕೆ ಬದಲಾಗುತ್ತಿರುವ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕಾನೂನುಗಳು ಕಾರಣ. ನಾನು ಸಿಎಂ ಇದ್ದಾಗ ಹಲವಾರು ಕಾನೂನು ಮಾಡಿದ್ದೇನೆ. ಈಗ ಎಂಪಿಯಾಗಿ ರೈತರ ಪರ ಕೆಲಸ ಮಾಡುತ್ತಿದ್ದೇನೆ. ರೈತ ಕೇಂದ್ರಿತ ಯೋಜನೆಗಳು ಬೇಕಿವೆ. ರೈತ ಬಲಿಷ್ಠವಾಗಿದ್ದರೆ ದೇಶ ಬಲಿಷ್ಠವಾಗುತ್ತದೆ. ಶೇ 50 ರಿಂದ 60 ರಷ್ಟು ಜನರು ಕೃಷಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕೃಷಿಯಲ್ಲಿ ಶೇ 60 ರಷ್ಟು ಉದ್ಯೋಗ ಇಲ್ಲದಿದ್ದರೆ ಈ ದೇಶದ ಪರಿಸ್ಥಿತಿ ಏನಾಗುತ್ತಿತ್ತು ? ಅತಿ ಹೆಚ್ಚು ಉದ್ಯೋಗ ಕೊಡುವ ಕೃಷಿಯಲ್ಲಿ ನೆಮ್ಮದಿಯಿಂದ 60 ರಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ 60 ರಷ್ಟು ಜನ ಕೃಷಿಯಲ್ಲಿ ಕೆಲಸ ಮಾಡುತ್ತಿರಿದ್ದರೂ, ಶೇ 6 ರಷ್ಟು ಕೃಷಿಗೆ ಸಬ್ಸಿಡಿ ಸಿಗುತ್ತಿದೆ. ಅಮೇರಿಕಾದಲ್ಲಿ ಶೇ 6 ರಷ್ಟು ಜನ ಕೃಷಿಯಲ್ಲಿದ್ದಾರೆ. ಅವರಿಗೆ ಶೇ 60 ರಷ್ಟು ಸಬ್ಸಿಡಿ ಸಿಗುತ್ತಿದೆ. ಅವರ ಜೊತೆ ಹೇಗೆ ಪೈಪೋಟಿ ಮಾಡುವುದು. ಅಂತಾರಾಷ್ಟ್ರೀಯ ಪೈಪೋಟಿ ಕೊಡುವ ರೈತ ಕೇಂದ್ರಿತ ಯೋಜನೆ ಜಾರಿ ಮಾಡಬೇಕು ಎಂದು ಹೇಳಿದರು.

ಬಂಡವಾಳ ಹೂಡಿಕೆ ಅಗತ್ಯ

ಸ್ವಾತಂತ್ರ್ಯ ಬಂದ ಮೇಲೆ ಅತಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಉತ್ಪಾದನೆಯಾಗುತ್ತಿರುವುದು ಕೃಷಿ ವಲಯದಲ್ಲಿ ಕೈಗಾರಿಕಾ ವಲಯದಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿದೆ. ಕೃಷಿ ವಲಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಬೇಕು. ನಾವು ಕೊಡುತ್ತಿರುವುದು ಬೆಳೆ ಸಾಲ ಮಾತ್ರ, ಮಣ್ಣನ್ನು ಕೃಷಿಗೆ ಯೋಗ್ಯವಾಗಿಡಲು ಬಂಡವಾಳ ಬೇಕು. ಮಳೆ ಗಾಳಿಯಿಂದ ವೈಪರಿತ್ಯವಾಗುತ್ತದೆ. ಹೊಸ ತಳಿ ಉತ್ಪಾದನೆಗೆ ಅತಿ ಹೆಚ್ಚು ಉತ್ಪಾದನೆಗೆ ಬಂಡವಾಳ ಹೂಡಬೇಕು. ಗ್ರಾಮೀಣ ಆರ್ಥಿಕ ವ್ಯವಸ್ಥೆ ಬದಲಾಗಬೇಕು. ಒಂದು ಎಕರೆ ಕಬ್ಬು ಬೆಳೆದರೆ ಇಷ್ಟು ಸಾಲ, ಒಂದು ಎಕರೆ ತೊಗರಿ ಬೆಳೆದರೆ ಮೂವತ್ತು ಸಾವಿರ ಸಾಲ ಅಂಥ ನಿರ್ಧಾರ ಆಗಬೇಕು. ಯಾವ ಬ್ಯಾಂಕ್ ಗಳಲ್ಲೂ ಕೂಡ ಭೂಮಿ ಆಧಾರಿತ ಸಾಲ ವ್ಯವಸ್ಥೆ ನಿರ್ಧಾರ ಆಗುತ್ತಿಲ್ಲ. ಇದರಿಂದ ರೈತರಿಗೆ ಹಣ ಸಾಲದೇ ಲೇವಾದೇವಿದಾರರ ಬಳಿ ಹೋಗುವ ಪರಿಸ್ಥಿತಿ ಬರುತ್ತದೆ. ರೈತರ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ. ನನಗೆ ಒಂದು ಘಟನೆ ನೆನಪಿಗೆ ಬರುತ್ತಿದೆ. ಒಬ್ಬ ರೈತ ಪಿಎಲ್‌ ಡಿ ಬ್ಯಾಂಕ್‌ನ ಸದಸ್ಯನಾಗಿದ್ದ ಅವನಿಗೆ ಹೆಣ್ಣು ಕೊಡಲಿಲ್ಲ. ಅದೇ ಬ್ಯಾಂಕಿನಲ್ಲಿ ಡಿ ದರ್ಜೆಯ ಉದ್ಯೋಗಿಗೆ ಆ ಹೆಣ್ಣು ಕೊಟ್ಟಿದ್ದರು. ಇದು ಹನ್ನೆರಡು ವರ್ಷದ ಹಿಂದೆ ನಡೆದಿರುವ ಘಟನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತನ ಮಕ್ಕಳು ಹಣಕಾಸಿನ ಸಮಸ್ಯೆಯಿಂದ ಶಾಲೆಗೆ ಹೋಗುವುದನ್ನು ನಿಲ್ಲಿಸಬಾರದು ಎಂದು ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೆ. ಸುಮಾರು 12 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಯಿತು. ರೈತರಿಗೆ ಮಕ್ಕಳಿಗೆ ಕಲಿಸುವ ಭಾರ ಕಡಿಮೆ ಮಾಡಲು ಯೋಜನೆ ತಂದಿದ್ದೆ. ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿ ತಂದಿದ್ದೆ. ಈಗ ಮುನ್ನೂರು ಕೋಟಿ ರೂ.ಗಿಂತ ಹೆಚ್ಚು ರೈತರಿಗೆ ಅನುಕೂಲವಾಗಿದೆ. ಅವರ ಮಕ್ಕಳಿಗೆ ನೌಕರಿ ಸಿಗುವ ವ್ಯವಸ್ಥೆ ಆಗಬೇಕು. ಮೀಸಲಾತಿಯನ್ನು ಎಸ್ಸಿ ಎಸ್ಟಿ ಹಿಂದುಳಿದವರಿಗೆ ಮಾಡುತ್ತೇವೆ. ಈಗಾಗಲೇ 56 ರಷ್ಟು ಮೀಸಲಾತಿ ಸಿಗುತ್ತಿದೆ. ಅದಕ್ಕೆ ದಕ್ಕೆಯಾಗದಂತೆ ರೈತರಿಗೆ ವೃತ್ತಿ ಆಧಾರಿತ ಮೀಸಲಾತಿಯನ್ನು ತರುವ ವ್ಯವಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಆಗಬೇಕು. ಆಗ ಮಾತ್ರ ರೈತರ ಮಕ್ಕಳಿಗೆ ಉದ್ಯೋಗ ಸಿಗುತ್ತದೆ. ಇಲ್ಲದಿದ್ದರೆ ರೈತರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಹೇಳಿದರು.

ರೈತರಿಗೆ ಸಿಬಿಲ್ ಬೇಡ

ರೈತರಿಗೆ ಸಾಲ ಕೊಡುವಾಗ ಸಿಬಿಲ್ ರೇಟಿಂಗ್ ಅಳವಡಿಸಬಾರದು ಎಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ. ಸಿಬಿಲ್ ಸಂಸ್ಥೆಗೂ ಬರೆದಿದ್ದೇನೆ. ಅವರೂ ಒಪ್ಪಿಕೊಂಡಿದ್ದಾರೆ. ಆದಷ್ಟು ಬೇಗ ಸಿಬಿಲ್ ರೇಟಿಂಗ್ ಹಾಕದಂತೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡುತ್ತೇನೆ. ರಾಜ್ಯ ಸರ್ಕಾರ ಕೃಷಿ ಬಜೆಟ್ಟನ್ನು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡುತ್ತಿಲ್ಲ. ಬೆಳೆ ಪರಿಹಾರನ್ನೂ ಕೊಟ್ಟಿಲ್ಲ. ನಾನು ಬೆಳೆ ಪರಿಹಾರವನ್ನು ಕೇಂದ್ರ ಸರ್ಕಾರ ಕೊಡುವ ಎರಡು ಪಟ್ಟು ಕೊಟ್ಟೆ ಕೇಂದ್ರ ಸರ್ಕಾರ ಒಣ ಬೇಸಾಯಕ್ಕೆ 6 ಸಾವಿರ ಕೊಟ್ಟರೆ ನಾನು 12 ಸಾವಿರ ಕೊಟ್ಟೆ, ನೀರಾವರಿಗೆ 13 ಸಾವಿರ ಕೊಟ್ಟರೆ ನಾನು 18 ಸಾವಿರ ಕೊಟ್ಟೆ, ತೋಟಗಾರಿಕೆಗೆ 18 ಸಾವಿರ ಕೊಟ್ಟರೆ ನಾನು 25 ಸಾವಿರ ರೂ. ಕೊಟ್ಟೆ ಸುಮಾರು 14 ಲಕ್ಷ ರೈತರಿಗೆ ನಾವು ಹಣ ಬಿಡುಗಡೆ ಮಾಡಿದ್ದೇವು. ನಾನು ಕೇಂದ್ರ ಸರ್ಕಾರಕ್ಕೆ ಬೆಳೆ ಹಾನಿಗೊಳಗಾದ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಅಕೌಂಟ್‌ ಗೆ ಹೋಗಬೇಕೆಂದು ಮನವಿ ಮಾಡಿದ್ದೇನೆ ಎಂದು ಹೇಳಿದರು.

60 ದಿನ ಕೃಷಿ ಕೂಲಿ

ಜಿ ರಾಮ್‌ ಜಿ ಯೋಜನೆ ಕೆಲಸ ಅರಸಿ ಬರುವವರಿಗೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಜನ ರೈತರ ಹೊಲದಲ್ಲಿ ಕೆಲಸ ಮಾಡುತ್ತಾರೆ. ಜಿ ರಾಮ್ ಜಿ ಯೋಜನೆ ಮೂಲಕ ರೈತರು ಹಿಂಗಾರು ಮತ್ತು ಮುಂಗಾರಿನಲ್ಲಿ 60 ದಿನ ಕಾರ್ಮಿಕರನ್ನು ತೆಗೆದುಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ರೈತರ ಸಮಸ್ಯೆ ಬಯಲ ಬದುಕು ಇರುವುದರಿಂದ ನಿರಂತರ ಇರುತ್ತದೆ. ದರ ಸರಿಯಾಗಿ ಸಿಗುವಂತಿದ್ದರೆ ಅವರಿಗೆ ಅನುಕೂಲವಾಗಲಿದೆ. ಬೇರೆ ದೇಶಗಳಲ್ಲಿ ಮೊದಲೇ ದರ ನಿಗದಿ ಆಗುತ್ತದೆ. ಇದರಿಂದ ರೈತನಿಗೆ ಖಾತ್ರಿ ಇರುತ್ತದೆ. ಆದರೆ, ಇಲ್ಲಿ ಎಷ್ಟು ದರ ಬರುತ್ತದೆ ಎಂದು ರೈತರಿಗೆ ತಿಳಿಯುವುದಿಲ್ಲ, ಎಷ್ಟು ಹಣ ತೊಡಗಿಸಬೇಕೆಂದು ತಿಳಿಯದಂತಾಗಿದೆ. ಅದನ್ನೇ ಇವತ್ತು ಇವರು ಎಂಎಸ್.ಪಿ. ಅಂತ ಮಾಡುತ್ತಿದ್ದಾರೆ. ಹೊಸ ಚಿಂತನೆ ಮಾಡುವ ಅವಶ್ಯಕತೆ ಇದೆ. ರೈತರನ್ನು ಉಳಿಸುವುದು ಬಹಳ ಮುಖ್ಯ ಶೇ 1 ರಷ್ಟು ಕೃಷಿ ಅಭಿವೃದ್ಧಿಯಾದರೆ ಉತ್ಪಾದನಾ ವಲಯದಲ್ಲಿ ಶೇ 4 ರಷ್ಟು ಅಭಿವೃದ್ಧಿ ಆಗತ್ತದೆ. ಉತ್ಪಾದನಾ ವಲಯದಲ್ಲಿ ಶೇ 4 ರಷ್ಟು ಅಭಿವೃದ್ಧಿಯಾದರೆ ಸೇವಾ ವಲಯದಲ್ಲಿ ಶೇ 10 ರಷ್ಟು ಅಭಿವೃದ್ಧಿಯಾಗುತ್ತದೆ. ಕೃಷಿ ಅಭಿವೃದ್ಧಿಯಾದಾಗ ಎಲ್ಲ ವಲಯಗಳೂ ಅಭಿವೃದ್ಧಿಯಾಗುತ್ತವೆ. 140 ಕೋಟಿ ಜನರಿಗೆ ಆಹಾರ ಒದಗಿಸಿ ನಮ್ಮ ದೇಶ ಸ್ವಾಭಿಮಾನ ಮಾಡುವುದು ಅಷ್ಟೇ ಮುಖ್ಯ ವಿಕಸಿತ ಭಾರತ ಭದ್ರ ಬುನಾದಿ ಆಗಬೇಕೆಂದರೆ ಕೃಷಿ ವಲಯದಿಂದ ಸಾಧ್ಯ. ಅದಕ್ಕೆ ಪ್ರಧಾನಿ ಮೋದಿಯವರು ಕಿಸಾನ್ ಸಮ್ಮಾನ ಯೋಜನೆ ಮಾಡಿದ್ದಾರೆ. ಈಗಾಗಲೇ 32 ಸಾವಿರ ಕೊಟಿ ರೂ. ಹಾಕಿದ್ದಾರೆ. ರಾಜ್ಯದ ಸಿಎಂಗೆ ರೈತರು ಅಂದರೆ ಅಸಡ್ಡೆ, ನೀರಾವರಿ, ರೈತರಿಗೆ ಪರಿಹಾರ ನೀಡುವಲ್ಲಿ ಯಾವುದೇ ಆಸಕ್ತಿ ಇಲ್ಲ. ಬದ್ಧತೆ ಇದ್ದರೆ ಮಾತ್ರ ಮಾಡಲು ಸಾಧ್ಯ. ರಾಜ್ಯ ಸರ್ಕಾರ ಕೃಷಿಯ ಬಗ್ಗೆ ತನ್ನ ಬದ್ಧತೆ ತೋರಿಸಬೇಕು. ಕೇಂದ್ರ ಸರ್ಕಾರ ಕೃಷಿ ಪರ ಯೋಜನೆಗಳನ್ನು ಅಳವಡಿಸಬೇಕು. ನಾನು ಮೊದಲಿನಿಂದಲೂ ಬದ್ದತೆಯಿಂದ ಕೆಲಸ ಮಾಡುತ್ತೇದ್ದೇನೆ ಅದೇ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಶರಣು ಸಲಗಾರ, ಮಾಜಿ ಸಂಸದ ಉಮೇಶ್ ಜಾಧವ, ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ ಸೇರಿದಂತೆ ರೈತ ಮುಖಂಡರು ಹಾಜರಿದ್ದರು‌.

Related Posts

Leave a Reply

Your email address will not be published. Required fields are marked *