ಬೆಂಗಳೂರು: ನಟಿ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸಿಸಿಬಿ ಸೈಬರ್ ಪೊಲೀಸರು 380 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ರಮ್ಯಾ ದೂರು ನೀಡಿ 60 ದಿನಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ 11 ಆರೋಪಿಗಳ ಮೇಲೆ 380 ಪುಟಗಳ ಸುಧೀರ್ಘ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ಇದುವರಗೆ 11 ಮಂದಿಯ ಬಂಧಿಸಲಾಗಿದ್ದು, 6 ಮಂದಿ ತಲೆಮರೆಸಿಕೊಂಡಿದ್ದಾರೆ. ಉಳಿದ 6 ಮಂದಿಯನ್ನು ಬಂಧಿಸಿದ ನಂತರ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ.
ಆರೋಪಿಗಳ ಮೊಬೈಲ್, ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕಿದ ಸ್ಕ್ರೀನ್ ಶಾಟ್, ವಿಡಿಯೋ ಶೇರ್ ಆಗಿರುವ ಲಿಂಕ್‌ಗಳು, ದೂರುದಾರೆ ರಮ್ಯಾ ಸ್ಟೇಟ್‌ಮೆಂಟ್, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಆರೋಪಿಗಳ ಸ್ವ ಇಚ್ಚಾ ಹೇಳಿಕೆ ಆಧಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.
ಅಶ್ಲೀಲ ಕಮೆಂಟ್ ಹಾಕಿದ ಇನ್ನೂ ನಾಲ್ವರು ಆರೋಪಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಚಾರ್ಜ್ ಶೀಟ್ ಬೆನ್ನಲ್ಲೇ ಶೀಘ್ರದಲ್ಲೇ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಲಿದೆ.