ಕರ್ನಲ್ ಸೋಫಿಯಾ ಖುರೇಷಿ ಕುರಿತು ತಾನು ನೀಡಿರುವ ಹೇಳಿಕೆ ಸಂಬಂಧ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಮಧ್ಯಪ್ರದೇಶ ಬಿಜೆಪಿ ಸಚಿವ ವಿಜಯ್ ಶಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಅರ್ಜಿಯ ತ್ವರಿತ ವಿಚಾರಣೆಗೆ ವಿಜಯ್ ಶಾ ಒತ್ತಾಯಿಸಿದ್ದಾರೆ.
ಮಧ್ಯಪ್ರದೇಶದ ಹೈಕೋರ್ಟ್ ಆದೇಶದ ಮೇರೆಗೆ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಇಂದೋರ್ ಜಿಲ್ಲೆಯಲ್ಲಿ ಮಧ್ಯಪ್ರದೇಶ ಸಚಿವ ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಹೈಕೋರ್ಟ್ ಆದೇಶದ ಮೇರೆಗೆ ಬುಡಕಟ್ಟು ಕಲ್ಯಾಣ ಸಚಿವ ವಿಜಯ್ ಶಾ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.
ಭಾರತೀಯ ಸಶಸ್ತ್ರ ಪಡೆಗಳು ಪ್ರಾರಂಭಿಸಿದ ‘ಆಪರೇಷನ್ ಸಿಂಧೂರ್’ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿಗಳಲ್ಲಿ ವಿವರಗಳನ್ನು ಹಂಚಿಕೊಂಡಿ ದ್ದರು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಕೂಡ ಇದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ವಿಜಯ್ ಶಾ, ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ನಾವು ಅವರ ಸಹೋದರಿಯನ್ನು ಮುಂದಿಟ್ಟುಕೊಂಡು ತಕ್ಕ ತಿರುಗೇಟು ನೀಡಿದ್ದೇವೆ. ಅವರು ಹಿಂದೂಗಳನ್ನು ವಿವಸ್ತ್ರಗೊಳಿಸಿ ಕೊಂದರು. ನಾವು ಪಾಕಿಸ್ತಾನದವರನ್ನು ವಿವಸ್ತ್ರಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಅವರ ಸಮುದಾಯದ ಮಗಳನ್ನು ಅವರ ಮೇಲಿನ ದಾಳಿಗೆ ಕಳುಹಿಸಿದ್ದೇವೆ. ನಿಮ್ಮದೇ ಸಮುದಾಯದ ಸಹೋದರಿ ನಿಮ್ಮನ್ನು ವಿವಸ್ತ್ರಗೊಳಿಸುತ್ತಾಳೆ. ನಿಮ್ಮ ಜಾತಿಯ ಹೆಣ್ಣುಮಕ್ಕಳನ್ನು ಸೇಡು ತೀರಿಸಿಕೊಳ್ಳಲು ಪಾಕಿಸ್ತಾನಕ್ಕೆ ಕಳುಹಿಸ ಬಹುದು ಎಂದು ಮೋದಿ ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದರು.
ಸೋಫಿಯಾ ಖುರೇಷಿಯನ್ನು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಅಳೆದಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ವಿಜಯ್ ಶಾ ಅವರ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು. ಈ ನಡುವೆ ವಿವಾದಾತ್ಮಕ ಹೇಳಿಕೆಗಳಿಗೆ ವಿಜಯ್ ಶಾ ಕ್ಷಮೆ ಯಾಚಿಸಿದ್ದರು. ಸೋಫಿಯಾ ಮತ್ತು ಸೈನ್ಯವನ್ನು ನಾನು ಗೌರವಿಸುತ್ತೇನೆ ಎಂದು ಹೇಳಿದ್ದರು. ಕನಸಿನಲ್ಲೂ ಸೋಫಿಯಾ ಖುರೇಷಿ ಬಗ್ಗೆ ತಪ್ಪಾಗಿ ಯೋಚಿಸಲು ಸಾಧ್ಯವಿಲ್ಲ ಎಂದಿದ್ದರು.
ಹೇಳಿಕೆಯ ಬಗ್ಗೆ ಜಬಲ್ಪುರ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿ ಅವರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲು ಆದೇಶಿಸಿತ್ತು. ವಿಜಯ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.