ಯುದ್ಧದ ಪರಿಸ್ಥಿತಿಯನ್ನು ಎದುರಿಸುವ ತಾಲೀಮಿನ ಭಾಗವಾಗಿ ಸೇನೆಯು ಪಂಜಾಬ್‌ನ ಫಿರೋಜ್‌ಪುರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಅರ್ಧ ಗಂಟೆ ವಿದ್ಯುತ್ ಕಡಿತ ಮಾಡಿ ‘ಬ್ಲ್ಯಾಕೌಟ್ ಡ್ರಿಲ್’ ನಡೆಸಿದೆ. ಯುದ್ಧದ ಸಂದರ್ಭದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಭದ್ರತಾ ದೃಷ್ಟಿಯಿಂದ ವಿದ್ಯುತ್ ತೆಗೆಯಲಾಗುತ್ತದೆ. ಆದ್ದರಿಂದ ಪೂರ್ವಾಭ್ಯಾಸ ನಡೆಸಲಾಗಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
ಭಾರತದ ದಾಳಿ ತಡೆಯುವಂತೆ ಬೇರೆ ದೇಶಗಳ ನೆರವು ಕೇಳುತ್ತಿರುವ ಪಾಕಿಸ್ತಾನ, ಭಾರತಕ್ಕೆ ಮತ್ತೆ ಅಣ್ವಸ್ತ್ರಗಳ ಪ್ರಯೋಗದ ಬೆದರಿಕೆ ಒಡ್ಡಿದೆ. ತನ್ನ ಮೇಲೆ ಭಾರತ ದಾಳಿ ನಡೆಸಿದರೆ ಅಥವಾ ನೀರಿನ ಹರಿವು ತಡೆದರೆ ಅಣ್ವಸ್ತ್ರ ಸೇರಿದಂತೆ ಎಲ್ಲಾ ರೀತಿಯ ಅಸ್ತ್ರಗಳನ್ನು ಬಳಸಿಕೊಂಡು ಪ್ರತಿದಾಳಿ ಮಾಡುವುದಾಗಿ ಬೆದರಿಸಿದೆ.
ಮಾಸ್ಕೋದಲ್ಲಿರುವ ಪಾಕಿಸ್ತಾನದ ಹಿರಿಯ ರಾಯಭಾರಿ ಮುಮ್ಮದ್ ಖಾಲಿದ್ ಜಮಾಲಿ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಭಾರತವು ಪಾಕಿಸ್ತಾನದ ನಿರ್ದಿಷ್ಟ ಪ್ರದೇಶಗಳನ್ನು ಗುರಿ ಮಾಡಿಕೊಂಡು ದಾಳಿ ನಡೆಸುವುದು ಸೋರಿಕೆಯಾದ ಮಾಹಿತಿಗಳಿಂದ ಸ್ಪಷ್ಟವಾಗಿದೆ. ಭಾರತವೇನಾದರೂ ದಾಳಿ ನಡೆಸಿದರೆ ನಾವು ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರ ಬಳಸಿಕೊಂಡು ಪ್ರತಿ ದಾಳಿ ನಡೆಸುತ್ತೇವೆ ಎಂದಿದ್ದಾರೆ.
ಭಾರತವು ಪಾಕಿಸ್ತಾನದ ಹಡಗುಗಳಿಗೆ ತನ್ನ ಬಂದರು ಪ್ರವೇಶಿಸಲು ನಿರ್ಬಂಧ ಹೇರಿದ ಬೆನ್ನಲ್ಲೇ ಗ ಪಾಕ್ ಪ್ರತೀಕಾರದ ಕ್ರಮಕ್ಕೆ ಮುಂದಾಗಿದೆ. ಭಾರತದ ಹಡಗುಗಳಿಗೆ ತನ್ನ ಬಂದರು ಪ್ರವೇಶ ನಿಷೇಧಿಸಿ ಪಾಕಿಸ್ತಾನ ಆದೇಶ ಹೊರಡಿಸಿದೆ. ಭಾರತದ ಧ್ವಜ ಹೊಂದಿರುವ ಹಡಗುಗಳು ನಮ್ಮ ಬಂದರು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. ಯಾವುದೇ ಪಾಕಿಸ್ತಾನಿ ಹಡಗುಗಳು ಭಾರತದ ಬಂದರಿನಲ್ಲಿ ಲಂಗರು ಹಾಕಕೂಡದು ಎಂದು ಪಾಕಿಸ್ತಾನ ಹಡಗು ಸಚಿವಾಲಯ ಹೇಳಿದೆ.
ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ಹೇರಿ ಆದೇಶ ಹೊರಡಿಸಿದೆ. ಪಾಕಿಸ್ತಾನದ ವಸ್ತುಗಳ ನೇರ ಮತ್ತು ಪರೋಕ್ಷ ಆಮದು, ಅಂಚೆ ಮತ್ತು ಕೊರಿಯರ್ ಸೇವೆಗೆ ನಿರ್ಬಂಧ ಹಾಗೂ ಪಾಕ್ ಹಡಗುಗಳಿಗೆ ಭಾರತದ ಬಂದರು ಪ್ರವೇಶಕ್ಕೆ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.