ಜಿಎಸ್ಟಿ ಕೌನ್ಸಿಲ್ ಎಂಟು ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್ ಪರಿಷ್ಕರಣೆಗೆ ಕ್ರಮ ಕೈಗೊಂಡಿದ್ದು, ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್ ಇರಲಿದ್ದು ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ. ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್ ಜೊತೆಗೆ ಐಷರಾಮಿ ವಸ್ತುಗಳಿಗೆ 40% ಜಿಎಸ್‌ಟಿಯ ಸ್ಲ್ಯಾಬ್ ಅನ್ವಯವಾಗಲಿದೆ.
ದೆಹಲಿಯಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು ಮೊದಲ ದಿನದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಜಿಎಸ್‌ಟಿ ಸ್ಲ್ಯಾಬ್ ಬದಲಾವಣೆ ಮಾಡಲಾಗಿದೆ. ದಿನ ಬಳಕೆ ವಸ್ತುಗಳು, ಆರೋಗ್ಯ ವಲಯ ಸೇರಿ ಹಲವು ವಲಯಗಳಿಗೆ ಅನುಕೂಲವಾಗಲಿದೆ. ದಸರಾ ಸಮಯದಲ್ಲಿ ಹೊಸ ಪರಿಷ್ಕೃತ ದರ ಜಾರಿಯಾಗಲಿದೆ.ಸರ್ಕಾರಗಳು ಈ ವಸ್ತುಗಳ ಮೇಲೆ ಯಾವುದೇ ಹೆಚ್ಚುವರಿ ಸುಂಕ, ಸೆಸ್ ವಿಧಿಸುವುದಿಲ್ಲ ಎಂದು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.
2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ ವಸ್ತುಗಳಿಗೆ 5% , 12%, 18%, 28 % ತೆರಿಗೆ ವಿಧಿಸಲಾಗುತ್ತಿತ್ತು. ಬಹುತೇಕ ದಿನಬಳಕೆ ವಸ್ತುಗಳನ್ನು ಕನಿಷ್ಠ ತೆರಿಗೆ ವ್ಯಾಪ್ತಿಗೆ ತರುವ ತೀರ್ಮಾನ ಮಾಡಲಾಗಿದೆ. ಶೇ. 28ರ ತೆರಿಗೆಯನ್ನು ಶೇ. 18ಕ್ಕೆ, ಶೇ. 18 ಮತ್ತು ಶೇ. 12ರ ಶ್ರೇಣಿಯಲ್ಲಿರುವ ವಸ್ತುಗಳನ್ನು ಶೇ. 5ಕ್ಕೆ ಇಳಿಸಲು ಜಿಎಸ್ಟಿ ಕೌನ್ಸಿಲ್ ಅಧಿಕೃತ ಸಮ್ಮತಿ ನೀಡಿದೆ. ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವ ವಿಮೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಕಾನ್ಸರ್ ಔಷಧಿಗಳು ಸೇರಿದಂತೆ 33 ಜೀವರಕ್ಷಕ ಔಷಧಿಗಳಿಗೂ ಇನ್ನು ಮುಂದೆ ತೆರಿಗೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬ್ರೆಡ್, ಹಾಲಿನ ಉತ್ಪನ್ನಗಳಿಗೂ ಶೂನ್ಯ ತೆರಿಗೆ ವಿಧಿಸಲಾಗಿದೆ. ಅದೇ ರೀತಿ ಸಾದಾ ಚಪಾತಿಗಳು, ಪರೋಟ, ಕಾಕ್ರಾ, ರೋಟಿಗಳನ್ನೂ ಶೂನ್ಯ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ತಂಬಾಕು, ಪಾನ್‌ಮಸಾಲಾ, ಐಷಾರಾಮಿ ಕಾರುಗಳು ಶೇ. 40ರ ತೆರಿಗೆ ವ್ಯಾಪ್ತಿಯಲ್ಲಿ ಮುಂದುವರಿಯಲಿವೆ. ಖಾಸಗಿ ವಿಮಾನಗಳನ್ನೂ ಇದೇ ವ್ಯಾಪ್ತಿಯಲ್ಲಿ ಇರಿಸಲಾಗಿದೆ. ಯಾಚ್‌ಗಳು, ಖಾಸಗಿ ಐಷಾರಾಮಿ ಬೋಟ್‌ಗಳನ್ನೂ ಈ ವ್ಯಾಪ್ತಿಗೆ ತರಲಾಗಿದೆ.ಕೂಲ್ ಡ್ರಿಂಕ್ಸ್‌ಗಳನ್ನೂ ಶೇ. 40ರ ತೆರಿಗೆ ವ್ಯಾಪ್ತಿಯಲ್ಲಿ ಇರಿಸಲಾಗಿದೆ. ಇದರಿಂದ ತಂಪು ಪಾನೀಯಗಳ ದರ ಗಣನೀಯವಾಗಿ ಏರಿಕೆಯಾಗಲಿದೆ.