ಬೆಂಗಳೂರು: ಸೋಯಾಬಿನ್, ಶೇಂಗಾ ಖರೀದಿ ಮಾಡಲು ತ್ವರಿತವಾಗಿ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆಯನ್ನು ಏಕಕಾಲಕ್ಕೆ ಆರಂಭಿಸಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಗಳಿಗೆ ಸೂಚಿಸಿದ್ದಾರೆ.
ಸೋಯಾಬಿನ್‌ಗೆ ಕ್ವಿಂಟಾಲ್‌ಗೆ 5,328 ರೂ. ಹಾಗೂ ಶೇಂಗಾಗೆ 7,623 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಬೀದರ್, ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿ, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಯಾಬಿನ್ ಹಾಗೂ ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಗದಗ, ಬಾಗಲಕೋಟೆ, ದಾವಣಗೆರೆ, ರಾಯಚೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶೇಂಗಾ ಖರೀದಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ನಾಫೆಡ್, ಎನ್‌ಸಿಸಿಎಫ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿಗೆ ಏಜನ್ಸಿಯಾಗಿ ನೇಮಕ ಮಾಡಲಾಗಿದೆ. ನೋಂದಣಿಗೆ 80 ದಿನ ಹಾಗೂ ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ನಿಗಾ ವಹಿಸಲು ಸೂಚನೆ:
ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಖರೀದಿ ಕೇಂದ್ರಗಳಲ್ಲಿ ಲೋಪಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಮಾರ್ಗಸೂಚಿ ಅನ್ವಯ ಖರೀದಿ ಮಾಡಲಾಗುತ್ತಿದೆಯೇ? ಎಂಬ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು ಎಂದು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಎಫ್‌ಎಕ್ಯೂ ಗುಣಮಟ್ಟ ಪರಿಶೀಲನೆಗೆ ಕೃಷಿ ಅಥವಾ ತೋಟಗಾರಿಕೆ ಇಲಾಖೆಯಲ್ಲಿ ಲಭ್ಯ ಇರುವ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು. ಅಗತ್ಯವಿದ್ದರೆ ಖರೀದಿ ಸಂಸ್ಥೆಗಳು ಅಂತಹ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.
ಹೆಸರು,ಉದ್ದು ಖರೀದಿಗೆ ಸೂಚನೆ: ಇತ್ತೀಚೆಗೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಮುಂಗಾರು ಹಂಗಾಮಿನ ಉದ್ದಿನಕಾಳು, ಹೆಸರುಕಾಳು ಹಾಗೂ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಗಳಿಗೆ ತಿಳಿಸಿದ್ದರು. ಖರೀದಿ ಏಜನ್ಸಿಗಳೊಂದಿಗೆ ಚರ್ಚೆ ಮಾಡಿ ತ್ವರಿತವಾಗಿ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭ ಮಾಡಿ ಎಂದು ನಿರ್ದೇಶನ ನೀಡಿದ್ದರು.
ಬೆಂಬಲ ಬೆಲೆಯಡಿ ಖರೀದಿ:
ಪ್ರತಿ ಕ್ವಿಂಟಾಲ್‌ಗೆ ಹೆಸರುಕಾಳು ರೂ.8,768, ಉದ್ದಿನಕಾಳು ರೂ.7,800, ಸೂರ್ಯಕಾಂತಿ ರೂ.7,721 ಬೆಂಬಲ ಬೆಲೆಯಡಿ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಬೆಂಬಲ ಬೆಲೆ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲು ವರ್ತಕರಿಗೆ ಅವಕಾಶ ನೀಡಬಾರದು. ರೈತರ ಹೆಸರಿನಲ್ಲಿ ಮಾರಾಟ ಮಾಡಲು ಬರುವ ವರ್ತಕರ ಬಗ್ಗೆ ಎಚ್ಚರಿಕೆ ವಹಿಸಬೇಕು ಹಾಗೂ ಅವರಿಂದ ಖರೀದಿ ಮಾಡಬಾರದು ಎಂದು ಸಚಿವರು ತಿಳಿಸಿದ್ದರು.
ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ತುಮಕೂರು, ಹಾಸನ, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಸರುಕಾಳು, ಕಲಬುರಗಿ, ಬೀದರ್, ಯಾದಗಿರಿ, ಗದಗ, ಧಾರವಾಡ, ವಿಜಯಪುರ ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಉದ್ದಿನಕಾಳು ಹಾಗೂ ಬಾಗಲಕೋಟೆ, ಬಳ್ಳಾರಿ, ಚಾಮರಾಜ ನಗರ, ಚಿತ್ರದುರ್ಗ, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಮೈಸೂರು, ಚಿಕ್ಕಮಗಳೂರು, ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸೂರ್ಯಕಾಂತಿ ಖರೀದಿ ಮಾಡಲಾಗುವುದು ಎಂದು ಸಚಿವರು ವಿವರಿಸಿದ್ದರು.