ಸ್ಪೀಕರ್ ಯು.ಟಿ ಖಾದರ್ ಗುರುವಾರ ಬೀದರ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ಈ ವಿಚಾರವಾಗಿ ಮಾಧ್ಯಮದವರು ಶುಕ್ರವಾರ ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಪ್ರಶ್ನಿಸಿದಾಗ , ನನಗೂ ಬೆದರಿಕೆ ಕರೆಗಳು ಬರುತ್ತವೆ. ಏನು ಮಾಡುವುದು, ಈ ಬಗ್ಗೆ ಪೊಲೀಸರಿಗೆ ತಿಳಿಸಿ, ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಉತ್ತರಿಸಿದ್ದಾರೆ.
ನಿಷೇಧಿತ ಪಿಎಫ್ಐ ಸಂಘಟನೆಯಿಂದ ಬೆದರಿಕೆ ಕರೆಗಳು ಬರುತ್ತಿರುವ ವಿಚಾರವಾಗಿ ಮಾತನಾಡಿದ್ದ ಯು.ಟಿ ಖಾದರ್, ನನಗೂ ಬೆದರಿಕೆ ಕರೆಗಳು ಬರುತ್ತಿವೆ. ರಾಜ್ಯದಲ್ಲಿ ಎನ್ಐಎ ಕಚೇರಿ ಸ್ಥಾಪನೆ ಮಾಡಲಿ ಎಂದು ಹೇಳಿದ್ದರು. ಸ್ಪೀಕರ್‌ಗೆ ಬಂದ ಬೆದರಿಕೆ ಕರೆ ಬಗ್ಗೆ ಪತ್ತೆ ಹಚ್ಚಿ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಹತ್ಯೆ ಯಾಕೆ ನಡೆದಿದೆ ಗೊತ್ತಿಲ್ಲ. ಕೊಲೆಯಾದ ವ್ಯಕ್ತಿ ರೌಡಿಶೀಟರ್ ಅಂತ ಹೇಳುತ್ತಿದ್ದಾರೆ. ಹಂತಕರು ಯಾರೇ ಆಗಿದ್ದರೂ ಕೂಡಲೇ ಕ್ರಮ ಆಗಬೇಕು. ಆರೋಪಿಗಳ ಶೀಘ್ರ ಪತ್ತೆಗೆ ಕ್ರಮ ವಹಿಸಬೇಕು. ಇಂತಹ ಘಟನೆಗಳಿಗಾಗಿಯೇ ಬಿಜೆಪಿಯವರು ಕಾಯುತ್ತಿದ್ದಾರೆ ಎಂದು ಹೇಳಿದರು.