Menu

ಉದ್ಯೋಗ ಪಡೆಯುವುದಷ್ಟೇ ಅಲ್ಲ, ಉದ್ಯೋಗ ಸೃಷ್ಟಿಸುವುದು ಜೀವನದ ಗುರಿಯಾಗಲಿ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: “ಉದ್ಯೋಗ ಪಡೆಯುವುದಷ್ಟೇ ಅಲ್ಲ, ಉದ್ಯೋಗ ಸೃಷ್ಟಿಸುವುದು ನಿಮ್ಮ ಜೀವನದ ಗುರಿಯಾಗಲಿ” ಡಿಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು ಹೇಳಿದರು.

ಕಲಬುರ್ಗಿಯ ಕೆಸಿಟಿ ಕಾಲೇಜು ಕ್ಯಾಂಪಸ್ ನಲ್ಲಿ ಬುಧವಾರ ನಡೆದ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ನಿಮ್ಮ ಜೀವನ ನಡೆಯಲು ನಿಮಗೆ ಉದ್ಯೋಗ ಬೇಕು ನಿಜ. ಆದರೆ ನೀವು ಉದ್ಯೋಗ ಮಾಡುವುದಕ್ಕಿಂತ ನೀವೇ ಹತ್ತಾರು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯುವತ್ತ ಗಮನಹರಿಸಿ. ಆಗ ಮಾತ್ರ ನೀವು ಯಶಸ್ವಿಯಾಗಲು ಸಾಧ್ಯ. ಉದ್ಯೋಗ ಸಿಗಲಿಲ್ಲ ಎಂದು ನೀವು ಎಂದಿಗೂ ಎದೆಗುಂದಬೇಡಿ. ಜೀವನದಲ್ಲಿ ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ. ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳಿ. ಕೌಶಲ್ಯ ಆಧಾರಿತ ಉದ್ಯೋಗ ಮಾಡಿದರೆ ಉತ್ತಮ ಜೀವನ ಸಾಗಿಸಬಹುದು. ನೀವು ಯಾವುದೇ ಕೆಲಸ ಮಾಡಿದರು ಆತ್ಮಗೌರವ ಇರಬೇಕು. ಇಲ್ಲಿ ಅನೇಕರು ಉದ್ಯೋಗಕ್ಕಾಗಿ ಬಂದಿದ್ದೀರಿ. ನೀವು ನಿಮ್ಮ ಜೀವನದಲ್ಲಿ ಸಾವಿರಾರು ಮೆಟ್ಟಿಲು ಹತ್ತುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಜೀವನದಲ್ಲಿ ಅನುಭವ ಸಿಕ್ಕಷ್ಟು ನಿಮ್ಮ ಬದುಕು, ಭವಿಷ್ಯ ಗಟ್ಟಿಯಾಗುತ್ತದೆ. ನಿಮ್ಮ ಬದುಕಿಗೆ ಉತ್ತಮ ಅನುಭವ ಪಡೆದುಕೊಳ್ಳಿ” ಎಂದು ತಿಳಿಸಿದರು.

“ಮಲ್ಲಿಕಾರ್ಜುನ ಖರ್ಗೆ ಅವರು ಯುಪಿಎ ಅವಧಿಯಲ್ಲಿ ಕಾರ್ಮಿಕ ಸಚಿವರಾಗಿದ್ದರು. ದೇಶದಲ್ಲಿ ಅನೇಕ ಕಾರ್ಮಿಕ ಸಚಿವರು ಬಂದು ಹೋಗಿದ್ದಾರೆ. ಆದರೆ ಆಸ್ಕರ್ ಫರ್ನಾಂಡೀಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕೈಗೊಂಡ ತೀರ್ಮಾನ ಬೇರೆ ಯಾರೂ ಕೈಗೊಂಡಿಲ್ಲ. ಕಲ್ಬುರ್ಗಿಯ ಇಎಸ್ಐ ಆಸ್ಪತ್ರೆ ಇದಕ್ಕೆ ಸಾಕ್ಷಿಯಾಗಿದೆ. ಆಮೂಲಕ ಬಡ ಕಾರ್ಮಿಕರ ಮಕ್ಕಳ ಆರೋಗ್ಯಕ್ಕೆ ನೆರವಾಗಿದ್ದಾರೆ. 371 ಜೆ ಮೂಲಕ ಈ ಭಾಗದ ಮಕ್ಕಳಿಗೆ ಉದ್ಯೋಗ ಹಾಗೂ ಶೈಕ್ಷಣಿಕವಾಗಿ ಉತ್ತೇಜನ ನೀಡಿದ್ದಾರೆ” ಎಂದರು.

“ಈ ಭಾಗದ ಯುವಕರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ನಮ್ಮ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಎಲ್ಲಾ ವರ್ಗದ ರಕ್ಷಣೆ ಮಾಡಲು ಕಾರ್ಯಕ್ರಮ ರೂಪಿಸಿಕೊಂಡು ಬಂದಿದೆ. ಕೋವಿಡ್ ಸಮಯದಲ್ಲಿ ಈ ಭಾಗದ ಕಾರ್ಮಿಕರು ಬೆಂಗಳೂರಿನಲ್ಲಿ ನನ್ನನ್ನು ಭೇಟಿ ಮಾಡಿ ಆಗಿನ ಬಿಜೆಪಿ ಸರ್ಕಾರ ಬಸ್ ದರವನ್ನು ಮೂರು ಪಟ್ಟು ಹೆಚ್ಚಿಸಿ ವಸೂಲಿ ಮಾಡುತ್ತಿದೆ ಎಂದು ದೂರು ನೀಡಿದರು. ಆಗ ನಮ್ಮ ನಾಯಕರ ಜತೆ ಚರ್ಚಿಸಿ ಕೆಪಿಸಿಸಿ ವತಿಯಿಂದ ರೂ. 1 ಕೋಟಿ ಹಣವನ್ನು ಸಾರಿಗೆ ಇಲಾಖೆಗೆ ಕೊಡಲು ಮುಂದಾದೆ. ಆಗ ಸರ್ಕಾರ ಒತ್ತಡಕ್ಕೆ ಮಣಿದು ಎಲ್ಲಾ ಕಾರ್ಮಿಕರಿಗೂ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಯಿತು” ಎಂದು ಹೇಳಿದರು.

“ಇದು ಐತಿಹಾಸಿಕ ಕಾರ್ಯಕ್ರಮ. ಕಲ್ಯಾಣ ಕರ್ನಾಟಕದ 26 ಸಾವಿರ ಜನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಲು ಮುಂದಾಗಿರುವ ಸಚಿವ ಶರಣಪ್ರಕಾಶ್ ಪಾಟೀಲ್ ಹಾಗೂ ಅವರ ತಂಡಕ್ಕೆ ಸರ್ಕಾರ ಪರವಾಗಿ ಹಾಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕೌಶಲ್ಯ ದೀಪವಿದ್ದಂತೆ. ನೀವು ಒಮ್ಮೆ ಕಲಿತರೆ ಜೀವನ ಪರ್ಯಂತ ನಿಮ್ಮ ಜೀವನದ ದಾರಿ ಬೆಳಗುತ್ತಿರುತ್ತದೆ. ಈ ಇಲಾಖೆಯ ಜವಾಬ್ದಾರಿ ವಹಿಸಿರುವ ಸಚಿವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ” ಎಂದು ಶ್ಲಾಘಿಸಿದರು.

“ನಮ್ಮ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳ ರಕ್ಷಣೆ ಸಿಗುತ್ತದೆ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ. ನಮ್ಮ ಸರ್ಕಾರದ ಮೇಲೆ ನಿಮ್ಮ ಆಶೀರ್ವಾದವಿರಲಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಐದು ಸಂಸದರನ್ನು ಗೆಲ್ಲಿಸಿ ದೊಡ್ಡ ಶಕ್ತಿ ತುಂಬಿದ್ದೀರಿ. ನಿಮಗೆ ಕೊಟಿ ನಮನ ಅರ್ಪಿಸುತ್ತೇನೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *