Menu

ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು: ಆರ್‌.ಅಶೋಕ

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಒಬ್ಬರು ಯುದ್ಧ ಬೇಕು ಎಂದರೆ, ಮತ್ತೊಬ್ಬರು ಶಾಂತಿ ಬೇಕು ಎನ್ನುತ್ತಾರೆ. ಎಐಸಿಸಿಯಲ್ಲಿ ಈ ಬಗ್ಗೆ ಸರಿಯಾದ ನಿಲುವು ಪ್ರಕಟಿಸಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಅಮೆರಿಕದ ಬಳಿ ಹೋಗಿ ಭಿಕ್ಷೆ ಬೇಡಿದ್ದನ್ನು ನೋಡಿದ್ದೇವೆ. ಮುಂಬೈಯಲ್ಲಿನ ಉಗ್ರ ದಾಳಿಯಲ್ಲಿ 175 ಜನರು ಸತ್ತಿದ್ದರು. ಆಗ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಪ್ರತಿಕ್ರಿಯೆ ನೀಡಲೇ ಇಲ್ಲ. ಆದರೆ ಈಗ ಪ್ರಧಾನಿ ಮೋದಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಸಿಂಧೂ ನದಿ ಒಪ್ಪಂದಕ್ಕೆ ನಾವು ಸಹಿ ಹಾಕಿಲ್ಲ. ಅದನ್ನು ಪ್ರಧಾನಿ ಮೋದಿ ರದ್ದು ಮಾಡಿದ್ದಾರೆ. ಭಯೋತ್ಪಾದಕ ದಾಳಿಗಳಾದಾಗಲೇ ಕಾಂಗ್ರೆಸ್‌ ಅದನ್ನು ಮಾಡಬೇಕಿತ್ತು. ಇದನ್ನು ಸಚಿವ ಸಂತೋಷ್‌ ಲಾಡ್‌ ಅರಿಯಬೇಕು ಎಂದರು.

ಇಡೀ ಜಮ್ಮು ಕಾಶ್ಮೀರ ಪ್ರಧಾನಿ ಮೋದಿಯವರ ಪರವಾಗಿ ನಿಂತಿದೆ. ಅಲ್ಲಿನ ಮುಖ್ಯಮಂತ್ರಿ ಕೂಡ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲಿನ ಅಭಿವೃದ್ಧಿಯನ್ನು ಜನರು ನೋಡಿದ್ದಾರೆ. ಪಾಕ್‌ ಆಕ್ರಮಿತ ಕಾಶ್ಮೀರ ನಮ್ಮದು, ಅದನ್ನು ಮರಳಿ ಪಡೆಯುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ನ ಒಬ್ಬೇ ಒಬ್ಬ ನಾಯಕರು ಈ ಮಾತನ್ನು ಧೈರ್ಯವಾಗಿ ಹೇಳಿಲ್ಲ ಎಂದರು.

ಯಾವುದೇ ಮಧ್ಯಸ್ಥಿಕೆಯನ್ನು ಒಪ್ಪಲ್ಲ ಎಂದು ವಿದೇಶಾಂಗ ಸಚಿವರು ಈಗಾಗಲೇ ಹೇಳಿದ್ದಾರೆ. ಆದರೂ ಕಾಂಗ್ರೆಸ್‌ನವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಮೊದಲು ಯುದ್ಧ ಬೇಡ, ಶಾಂತಿ ಬೇಕು ಎಂದವರು ನಂತರ ಯುದ್ಧ ಮಾಡಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಕದನ ವಿರಾಮವನ್ನು ಸ್ವಾಗತಿಸಿದ್ದಾರೆ. ಆದರೆ ಅದೇ ಕಾಂಗ್ರೆಸ್‌ನಲ್ಲಿ ಹಲವರು ಯುದ್ಧ ಮುಂದುವರಿಸಬೇಕಿತ್ತು ಎಂದಿದ್ದಾರೆ. ಕಾಂಗ್ರೆಸ್‌ನಲ್ಲೇ ಅನೇಕ ಗುಂಪುಗಳಿದ್ದು, ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಾರೆ. ಜೈರಾಮ್‌ ರಮೇಶ್‌ ಅವರು ಎಚ್ಚರಿಕೆ ನೀಡಿದ ನಂತರವೂ ಎಲ್ಲರೂ ವಿರುದ್ಧ ಹೇಳಿಕೆ ನೀಡುತ್ತಾರೆ ಎಂದು ದೂರಿದರು.

ಎಐಸಿಸಿಯಲ್ಲಿ ಯುದ್ಧದ ಕುರಿತು ಸರಿಯಾದ ನಿಲುವು ಪ್ರಕಟ ಮಾಡಲಿ. ಯುದ್ಧ ಬೇಕೆ, ಶಾಂತಿ ಬೇಕೆ, ಸಂಧಾನ ಬೇಕೆ ಎಂಬುದನ್ನು ಸರಿಯಾಗಿ ತಿಳಿಸಲಿ. ಆ ನಂತರ ಅಧಿವೇಶನದ ಬಗ್ಗೆ ಮಾತಾಡಲಿ. ಯೋಧರು ಈಗಲೂ ಭಯೋತ್ಪಾದಕರನ್ನು ಹುಡುಕಿ ಕೊಲ್ಲುತ್ತಿದ್ದಾರೆ. ಅಂತಹ ಯೋಧರ ಬಗ್ಗೆ ಎಲ್ಲರೂ ನಂಬಿಕೆ ಇರಿಸಬೇಕು. ಕಾಶ್ಮೀರದಲ್ಲಿ ಕಾಂಗ್ರೆಸ್‌ ಮಿತ್ರಪಕ್ಷಗಳ ಆಡಳಿತವಿದೆ. ಆ ಸರ್ಕಾರವನ್ನು ಇವರು ಎಂದಿಗೂ ಪ್ರಶ್ನಿಸುವುದಿಲ್ಲ. ಇಂತಹ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದರು.

ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು

ಬೆಂಗಳೂರನ್ನು ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಒಂದು ಬೆಂಗಳೂರು ಕಟ್ಟಿದರೆ, ಕಾಂಗ್ರೆಸ್‌ ಸರ್ಕಾರ ಬೆಂಗಳೂರನ್ನು ಮೂರು ಭಾಗ ಮಾಡಿದೆ. ಇದರಿಂದಾಗಿ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. 110 ಹಳ್ಳಿಗಳಲ್ಲಿ ಜನರಿಗೆ ಹೆಚ್ಚು ತೆರಿಗೆ ವಿಧಿಸಲಾಗಿದೆ. ಯಾರದ್ದೋ ಜಮೀನಿಗೆ ಬೆಲೆ ಹೆಚ್ಚುವಂತೆ ಮಾಡಲು ಇಂತಹ ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಕೆಂಪೇಗೌಡರ ಚಿಂತನೆಗೆ ದ್ರೋಹ ಬಗೆದಂತಾಗಿದೆ. ಬೆಂಗಳೂರು ಭಾಗವಾದರೆ ಆದಾಯ ಬರುವುದಿಲ್ಲ. ಐಟಿ ಬಿಟಿ ಕೇಂದ್ರಗಳು ಒಂದು ಕಡೆ ಇರುವಾಗ, ಮತ್ತೊಂದು ಕಡೆಗೆ ಆದಾಯವೇ ಬರುವುದಿಲ್ಲ. ಮೂರು ಪಾಲಿಕೆಗಳು ನಿರ್ಮಾಣವಾದರೆ ಅಲ್ಲಿ ಕನ್ನಡಿಗರೇ ಮೇಯರ್‌ ಆಗುತ್ತಾರೆ ಎಂಬ ಖಚಿತತೆ ಇಲ್ಲ ಎಂದರು.

ಮುಖ್ಯಮಂತ್ರಿಗಳು ಪಾಲಿಕೆಯಿಂದ ಆಯ್ಕೆಯಾಗುವುದಿಲ್ಲ ಎಂದಾದ ಮೇಲೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಅವರನ್ನು ಹೇಗೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಕೆ ಸಭೆಯಲ್ಲಿ ಬಂದು ಕೂರಲು ಸಾಧ್ಯವಿಲ್ಲ. ಬೆಂಗಳೂರು ಭಾಗ ಆಗಬಾರದು ಎಂಬುದು ಬಿಜೆಪಿಯ ಅಭಿಪ್ರಾಯ. ಮುಂದೆ ನಮ್ಮ ಸರ್ಕಾರ ಬಂದರೆ ಬೆಂಗಳೂರನ್ನು ಒಂದು ಮಾಡುವ ಕೆಲಸ ಮಾಡುತ್ತೇವೆ. ಗ್ರೇಟರ್‌ ಬೆಂಗಳೂರಿಗೆ ವಿರುದ್ಧವಾಗಿ ಕಾನೂನು ಹೋರಾಟ ಮಾಡಲಿದ್ದೇವೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಲಾಭಕ್ಕೆ ಎಲ್ಲವನ್ನೂ ಮಾಡುತ್ತಿದ್ದಾರೆ. ಬಿಡಿಎ ಲೇಔಟ್‌ಗಳು ಇನ್ನೂ ಖಾಲಿ ಇದ್ದು, ಅಲ್ಲಿಗೆ ನೀರು, ವಿದ್ಯುತ್‌ ಕೊಡಲು ಆಗುತ್ತಿಲ್ಲ. ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಈ ಯೋಜನೆ ಮಾಡಿದ್ದಾರೆ. ನಗರದಲ್ಲಿ ಎಲ್ಲ ಕಡೆ ಕಸದ ರಾಶಿ ಇದೆ, ಮೇಕೆದಾಟು ಯೋಜನೆ ಜಾರಿ ಮಾಡಿಲ್ಲ, ನಗರದ ಆಡಳಿತ ನಡೆಸಲು ಆಗುತ್ತಿಲ್ಲ. ಇಂತಹ ವಿಫಲತೆಯನ್ನು ಒಪ್ಪಿಕೊಳ್ಳದೆ ಇಂತಹ ಯೋಜನೆ ತಂದಿದ್ದಾರೆ ಎಂದು ಟೀಕಿಸಿದರು.

Related Posts

Leave a Reply

Your email address will not be published. Required fields are marked *