ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪಗಳನ್ನು ಸಾಬೀತು ಪಡಿಸಬೇಕು. ಆಧಾರವಿಲ್ಲದೆ ಆರೋಪಗಳನ್ನು ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆಯ ಎಂ. ಬಿ .ಎ ಗ್ರೌಂಡ್ ಹೆಲಿಪ್ಯಾಡ್ ಆವರಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರದಲ್ಲಿ 60% ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಎಲ್ಲಾ ಕಾಲದಲ್ಲಿಯೂ ಬಸ್ ದರಗಳು ಏರಿಕೆಯಾಗಿದೆ. ನೌಕರರ ವೇತನ, ಡೀಸಲ್ ಬೆಲೆ ಏರಿಕೆ,ಬಸ್ಸುಗಳನ್ನು ಕೊಳ್ಳುವುದು ಹಾಗೂ ಹಣದುಬ್ಬರ, ಸಾರಿಗೆ ನಿಗಮಗಳು ತೊಂದರೆಯಲ್ಲಿ ಇರುವುದರಿಂದ ಬೆಲೆಯೇರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬಿಜೆಪಿ ಹಾಗೂ ಕುಮಾರಸ್ವಾಮಿಯವರ ಕಾಲದಲ್ಲಿಯೂ ಬೆಲೆ ಹೆಚ್ಚಿಸಲಿಲ್ಲವೇ, ಕೇಂದ್ರ ಸರ್ಕಾರ ರೈಲ್ವೆ ದರ ಏರಿಕೆ ಮಾಡಿಲ್ಲವೇ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಬದಲಾವಣೆಯ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಈ ವಿಷಯಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ನಾಗೇಂದ್ರ ಅವರ ರಾಜೀನಾಮೆಯಿಂದ ಖಾಲಿಯಾಗಿರುವ ಸಚಿವ ಸ್ಥಾನವನ್ನು ತುಂಬುವ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸಲು ನಾವು ಸಿದ್ಧ, ವಿಷಯ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕು ಎಂದರು.
ಒಳಮೀಸಲಾತಿ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು ಪ್ರಾಯೋಗಿಕ ಮಾಹಿತಿ ಇಲ್ಲದಿರುವುದರಿಂದ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಊಟಕ್ಕೆ ಸೇರುವುದೇ ತಪ್ಪೇ, ರಾಜಕಾರಣಿಗಳು ಊಟಕ್ಕೆ ಸೇರಿದರೆ ಬಣ್ಣ ಕಟ್ಟಲಾಗುತ್ತದೆ. ಅಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಬೇಕೆಂದು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಜೆಟ್ ನಲ್ಲಿ ಘೋಷಿಸಲಾಗಿತ್ತು ಅಲ್ಲವೇ ಎಂಬ ಪ್ರಶ್ನೆಗೆ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಈ ಬಾರಿಯ ಬಜೆಟ್ ಅನ್ನು ಮಾರ್ಚ್ ನಲ್ಲಿ ಮಂಡಿಸಲಾಗುವುದು, ಆಯವ್ಯಯ ಪೂರ್ವಭಾವಿ ಚರ್ಚೆ ಪ್ರಾರಂಭವಾದ ನಂತರ ದಿನಾಂಕ ತಿಳಿಸಲಾಗುವುದು ಎಂದಿದ್ದಾರೆ.