ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ತೋರಿಸಿದ 11ಮತ್ತು 12ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.
ವಿಶೇಷ ತನಿಖಾ ತಂಡ (SIT) ಸೋಮವಾರ ಪಾಯಿಂಟ್ ಸಂಖ್ಯೆ 11 ರಲ್ಲಿ ಉತ್ಕನನ ನಡೆಸಬೇಕಿತ್ತು. ಆದರೆ ಈ ಜಾಗದ ಮೇಲಿನ ಭಾಗಕ್ಕೆ ತೆರಳಿತ್ತು. ಈ ಜಾಗದಲ್ಲಿ ತೆರಳಿದಾಗ ಮನುಷ್ಯನ ಮೂಳೆಗಳು ಸಿಕ್ಕಿತ್ತು. ಹೀಗಾಗಿ ಇಂದು ಪಾಯಿಂಟ್ ಸಂಖ್ಯೆ 11 ರಲ್ಲಿ ಉತ್ಕನನ ನಡೆಯಿತು.
ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು. 6 ಅಡಿ ಗುಂಡಿ ತೋಡಿದರೂ ಯಾವುದೇ ಕಳೇಬರ ಪತ್ತೆಯಾಗಲಿಲ್ಲ. ಕೊನೆಗೆ ಹಿಟಾಚಿ ಮೂಲಕ ಅಗೆದ ಜಾಗವನ್ನು ಮುಚ್ಚಲಾಯಿತು.
ಈಗ ಪಾಯಿಂಟ್ ನಂ 11 ರ ಬಳಿಯೇ ಇರುವ 12ನೇ ಪಾಯಿಂಟ್ ಬಳಿ ಉತ್ಕನನ ನಡೆಯುತ್ತಿದೆ. ಮಧ್ಯಾಹ್ನದ ನಂತರ ಜೋರಾಗಿ ಮಳೆಯಾಗುತ್ತಿರುವ ಕಾರಣ ಉತ್ಕನನಕ್ಕೆ ಸಮಸ್ಯೆಯಾಗುತ್ತಿದೆ. ಹೀಗಿದ್ದರೂ ಕಾರ್ಮಿಕರು ಶ್ರಮವಹಿಸಿ ಮಣ್ಣು ತೆಗೆದು ಶೋಧಿಸುತ್ತಿದ್ದಾರೆ.
ಇಲ್ಲಿಯವರೆಗೆ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಸಿಕ್ಕಿತ್ತು. ತನ್ನ ದೂರಿನಲ್ಲಿ ದೂರುದಾರ 13 ಜಾಗಗಳಲ್ಲಿ ಹೆಣವನ್ನು ಹೂತಿದ್ದೇನೆ ಎಂದು ತಿಳಿಸಿದ್ದ.