Menu

ತಾಳಿ ಉಳಸಾಕ್ ಆಗದಿದ್ರ ಆಳಾರಿಗೆಲ್ಲೈತಿ ಮರ್ಯಾದಿ!

ಸಂಜಿ ಮುಂದ ಮನ್ಯಾಗ ಚುನಮರಿ ಮಿರ್ಚಿ ಬಜ್ಜಿ ತಿಂದು ಚಾ ಕುಡುದು ಟಿವಿ ನೊಡ್ಕೊಂತ ಕುಂತಿದ್ದಿ, ಶ್ರೀದೇವಿ ಮಹಾತ್ಮ ಧಾರಾವಾಯಾಗ ಪಾರ್ವತಿ ಪಾರ್ಟ್ ಮಾಡಿದ ಹೆಣ್ಮಗಳ ಕೊಳ್ಳಾಗಿನ ತಾಳ್ಯಾಗ ಕರಿಮಣಿ ನಡಕ ಬಂಗಾರದ ಗುಂಡು ಹಾಕ್ಕೊಂಡಿದ್ದು ಯಜಮಾನ್ತಿ ಕಣ್ಣಿಗಿ ಬಿತ್ತು. ಅಕಿ ಕೊಳ್ಳಾಗಿನ ತಾಳಿ ಸರದಾಗಿನ ಗುಂಡು ನೋಡ್ರಿ ಎಷ್ಟ ಚಂದ ಕಾಣಾತಾವು ಅಂದ್ಲು.

ಯಾಕೋ ಈ ಧಾರಾವಾಯಿ ನಮ್ ಪರ್ಸ್‌ಗೆ ಕತ್ತರಿ ಹಾಕುವಂಗ ಕಾಣತೈತಿ ಅಂತ ಅನಸಿ ಆಕಿ ಶಿವನ ಹೆಂಡ್ತಿ ಪಾರ್ವತಿ ಏನ್ ಹಾಕ್ಕೊಂಡ್ರು ಚಂದ್ ಕಾಣತಾಳು, ಪುರಾಣ ಕಾಲದಾಗನ ಹೆಣ್ಮಕ್ಕಳ ತಾಳಿ ಸರದಾಗ ಬಂಗಾರದ ಗುಂಡು ಇರತಿದ್ದುನ ಅಂತ ಡೌಟ್ ಬಂತು. ಈ ಧಾರಾವಾಯ್ಯಾರು, ಸಿನೆಮಾದಾರು, ದೇವರ್ನ ಹೆಂಗೆಂಗ್ ರೆಡಿ ಮಾಡ್ತಾರೊ ಗೊತ್ತ ಆಗುದಿಲ್ಲ ಅಂದ್ನಿ. ಈಗೇನ್ ಎಲ್ಲಾರೂ ತಾಳಿ ಸರದಾಗ ಕರಿಮಣಿ ಹಾಕ್ಕೊಳ್ಳುದು ಬಿಟ್ಟು ಫುಲ್ ಬಂಗಾರದನ ಗಂಟನ್ ಮಾಡ್ತಿಕೊಳ್ಳಾಕತ್ತಾರು ಅಂದ್ಲು ಯಜಮಾನ್ತಿ, ಯಾಕೊ ಗಂಟನ್ ನಮಗೂ ಗಂಟ್ ಬೀಳುವಂಗ ಕಾಣತೈತಿ ಅಂತ ಅನಸ್ತು. ನಿನ್ ಕೊಳ್ಳಾಗಿನ ತಾಳಿ ಸರಕ್ಕ ಏನೂ ಧಕ್ಕಿ ಆಗದಂಗ ಐತೆಲ್ಲ ಅಷ್ಟಕರ ಸಮಾಧಾನ ಪಟ್ಕ. ಪಾಪ ಎಷ್ಟೊ ಜನಾ ಹೆಣ್ಣಕ್ಕು ನೋಡಿಯಿಲ್ಲೊ. ಮೈಕ್ರೊ ಫೈನಾನ್ನ್ಯಾರಿಂದ ಸಾಲಾ ಮಾಡಿದ ತಪ್ಪಿಗೆ ಕೊಳ್ಳಾಗಿನ ತಾಳಿ ಮಾರು ಸ್ಥಿತಿ ಬಂದೈತಿ ಅಂದೆ.

ರಾಜ್ಯದಾಗ ಹದಿನೈದ್ ದಿನದಿಂದ ಎಲ್ಲಿ ನೋಡಿದ್ರೂ ಬರೇ ಮೈಕ್ರೊ ಫೈನಾನ್ಸ್ನ್ಯಾರದ ಹಣಗಲಾ ನಡದೈತಿ, ಅವರು ಅಷ್ಟು ಓಪನ್ನಾಗಿ ಸಾಲಾ ಕೊಟ್ಟಾರ ಮನಿಗಿ ಹೋಗಿ ಧಮಕಿ ಹಾಕಿ, ಮಾತ್ ಕೇಳದಿದ್ರ ಹೊಡದು, ಹೊರಗ ಹಾಕತಾರು ಅಂದ್ರ ಅವರಿಗೆ ಕಾನೂನ್ಯಾಗ ಅಷ್ಟೊಂದು ಪಾವರ್ ಕೊಟ್ಟಾರ? ಹಡದ ಬಾಣತೀನ ಮನಿ ಬಿಟ್ಟು ಹೊರಗ ಹಾಕಿ ರೋಡಿನ್ಯಾಗ ನಿಲ್ಲಸ್ತಾರು, ಗಂಡ ಇಲ್ಲದ ಹೆಣ್ಮಗಳು ತನ್ನ ಕೊಳ್ಳಾಗಿನ ತಾಳಿ ಮಿನಿಸ್ಟರ್ಗ್ ಪೋಸ್ಟ್ ಮಾಡಿ ಮೈಕ್ರೊ ಪೈನಾನ್ಸ್ ನ್ಯಾರಿಂದ ತಮ್ಮ ಪರಿಸ್ಥಿತಿ ಎಲ್ಲಿಗಿ ಬಂದು ನಿಂತೈತಿ ಅಂತ ಹೇಳಿದ್ರ, ಅವರು ನಮ್ ಲಿಮಿಟ್ಸ್ನ್ಯಾಗ ಬರೂದಿಲ್ಲ ಅಂತ ಒಬ್ಬ ಮಿನಿಸ್ಟರ್ ಬಾಯಿ ಬಿಟ್ಟು ಹೇಳ್ತಾರಂದ ನಾವು ಎಂಥಾ ವ್ಯವಸ್ಥೆದಾಗ ಅದೇವಿ ಅಂತ ಯೋಚನೇನು ಮಾಡಾಕ್ ಆಗದಂಗ ಆಗೇತಿ. ರಾಜ್ಯದಾಗಿನ ಈಗಿನ ಪರಿಸ್ಥಿತಿ ನೋಡಿದ್ರ ನಮ್ಮ ಸಮಾಜದಾಗ ಈಗೂ ಎಂಭತ್ತರ ದಶಕದಾಗಿನಂಗ ಪಾಳೆಗಾರಿಕೆ, ಪರ್ಯಾಯ ಸರ್ಕಾರ ಜೀವಂತ ಐತಿ ಅಂತ ಅನಸ್ತೈತಿ.

ರಾಜ್ಯಸರ್ಕಾರದ ಗೃಹಲಕ್ಷ್ಮೀ ಗ್ಯಾರೆಂಟಿ ಯೋಜನೆಯಿಂದ ಎಲ್ಲಾ ಹೆಣ್ಮಕ್ಕಳು ಫುಲ್ ಖುಷಿಯಾಗ್ಯಾರು ಅಂತ ಸರ್ಕಾರ ಪುಟಗಟ್ಟಲೇ ಅಡ್ವರ್ಟೈಸ್ಮೆಂಟ್ ಕೊಟ್ಟ ಕೊಡತೈತಿ. ಇಲ್ಲಿ ನೋಡಿದ ಗೃಹಲಕ್ಷ್ಮೀಗೋಳ ಕೊಳ್ಳಾನ ತಾಳಿ ಉಳಸ್ಕೊಳ್ಳಾಕ ದಿನ್ನಾ ಮುಂಜಾನೆದ್ದ ಹೋರಾಟ ಮಾಡು ಪರಿಸ್ಥಿತಿ ಐತಿ ಅಂದ್ರ ಸರ್ಕಾರದ ಗ್ಯಾರೆಂಟಿ ದುಡ್ಡು ಯಾ ಲಕ್ಷ್ಮೀಯರಿಗೆ ಹೊಂಟೇತಿ ಅನ್ನೋದ ತಿಳಿದಂಗ ಆಗೇತಿ.

ಅಧಿಕಾರ ನಡೆಸಾರಿಗೆ ತಮ್ಮ ಕುರ್ಚಿಗಿ, ಅಧಿಕಾರಕ್ಕ ಏನರ ಕಂಟಕ ಬರತೈತಿ ಅಂತ ಗೊತ್ತಾದ್ರ ರಾತ್ರೋ ರಾತ್ರಿ ಕ್ಯಾಬಿನೆಟ್ ಮೀಟಿಂಗ್ ಮಾಡಿ, ಅಧಿಕಾರ ಉಳಿಸಿಕೊಳ್ಳಾಕ ಕಾನೂನು ಮಾಡ್ತಾರು. ಆದ್ರ, ಗೃಹ ಲಕ್ಷ್ಮೀ ಅಂತ ಹೇಳಿ ಹೆಣ್ಮಕ್ಕಳಿಗೆ ಮರ್ಯಾದಿ ಕೊಡೊ ಸರ್ಕಾರ, ಆ ಗೃಹ ಲಕ್ಷ್ಮೀಗೋಳ ಕೊಳ್ಳಾಗಿನ ತಾಳಿ ಕಿತ್ಕಂಡು ಹೊಂಟ್ರೂ, ಹಿಂದಿನ್ಯಾರು ಮಾಡಿದ್ದು ಕಾನೂನು ಸರಿಯಿಲ್ಲಾ, ನಮಗ ಅಧಿಕಾರ ಇಲ್ಲಾ ಅಂತ ಕತಿ ಹೇಳ್ಕೊಂತ ಕುಂತಾರು ಅಂದ್ರ ಇವರಿಗೆ ಆ ಲಕ್ಷ್ಮೀಗೋಳ ಶಾಪ ತಟ್ಟದ ಇರತೈತೆನ?

ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಗಣರಾಜ್ಯ ಆಗಿ ಎಪ್ಪತ್ತಾರು ವರ್ಷ ಆಗೇತಿ, ಇನ್ನೂ ಇಂತಾ ವಿಚಾರದಾಗ ತಪ್ ಮಾಡಿದಾರ ಮ್ಯಾಲ ಕ್ರಮ ಕೈಗೊಳ್ಳಾಕ ಅಧಿಕಾರ ನಡಸಾರು ಯೋಚನೆ ಮಾಡ್ತಾರು ಅಂತ ಅಂದ್ರ ಇವರೂ ಅದರ ಫಲಾನುಭವಿಗೋಳ ಆದಾರೋ ಏನ್ ಮಾಲಕರ ಅದಾರೋ ಅನ್ನೋ ಸಂಶೆ ಬರಾಕ್ ಶುರುವಕ್ಕೇತಿ. ಸಿದ್ರಾಮಯ್ಯ ಸಾಹೇಬ್ರು ಸಿಎಂ ಆದಾಗನ ಈ ಥರಾ ನಡ್ಯಾಕತ್ತೇತಿ ಅಂದ್ರ ಇನ್ನ ಅವರ್ನ ನಂಬಿರೋ ಜನರು ಯಾರ್ನ್ ನಂಬಿ ಜೀವನಾ ಮಾಡ್ಬೇಕು ಅನ್ನೋದ ತಿಳಿದಂಗ ಆಗೇತಿ.

ನಮ್ಮ ದೇಶದ್ದು ಜಗತ್ತಿನ್ಯಾಗ ಐದನೇ ದೊಡ್ಡ ಆರ್ಥಿಕ ಶಕ್ತಿ ಅಂತ ಹೆಮ್ಮೆಯಿಂದ ಹೇಳ್ಕೊಂತ ತಿರಗ್ಯಾಡಾಕತ್ತೇವಿ. ಆದ್ರ, ಅಷ್ಟು ದೊಡ್ಡ ಆರ್ಥಿಕ ಶಕ್ತಿ ಆಗಾಕ ಕಾರಣಾನ ದುಡಿಯೋ ಜನರು. ಆ ದುಡಿ ಜನರ ನೆಮ್ಮದಿಯಾಗಿಲ್ಲ ಅಂದ, ದೇಶ ಎಷ್ಟ ಶ್ರೀಮಂತ ಆದ್ರೇನು ಬಂತು. ಮೊದ್ಲು ಜನಸಂಖ್ಯೆ ಜಾಸ್ತಿ ಇದ್ರ ದೇಶಕ್ಕೆ ಭಾರ ಅಂತಿದ್ರು, ಈಗ ಜನಸಂಖ್ಯೆನ ದೇಶದ ಸಂಪತ್ತು ಅನ್ನು ಕಾಲ ಬಂದೈತಿ, ಚೀನಾದಂತಾ ದೇಶ ಹೆಚ್ಚಗಿ ಮಕ್ಕಳ ಹಡ್ಯಾರಿಗೆ ಗೌರ್ಮೆಂಟ ಎಲ್ಲಾ ರೀತಿ ಸವಲತ್ತು ಕೊಡಾಕತ್ತೇತಂತ.

ಅಮೇರಿಕಾದಾಗ ಕಡಿಮಿ ಮಕ್ಕಳ ಮಾಡ್ಕೊಂಡು ದುಡ್ಯಾಕ ಮಂದಿ ಬೇಕಂತೇಳಿ, ಬ್ಯಾರೆ ದೇಶದಾರಿಗೆಲ್ಲ ಕರೆದು ಕೆಲಸಾ ಕೊಟ್ಟು, ಈಗ ಅಮೇರಿಕಾದಾರಿಗಿಂತ ಬ್ಯಾರೇ ದೇಶದಾರ ಜಾಸ್ತಿ ಆಗಾಕತ್ತಾರಂತ, ಹಿಂಗಾಗೆ ಟ್ರಂಪ್ ಬ್ಯಾರೇ ದೇಶದಿಂದ ಬಂದಾರಿಗೆ ಹುಟ್ಟೂ ಮಕ್ಕಳಿಗೆ ತಮ್ಮ ದೇಶದ ಸಿಟಿಜನ್ ಶಿಪ್ ಕೊಡುದಿಲ್ಲ ಅಂತ ಹೇಳಿ ಎಲ್ಲಾರ್ನೂ ಹೊರಗ ಹಾಕಾಕತ್ತಾರಂತ, ಹಿಂಗಾಗಿ ನಮ್ಮ ದೇಶದ ಹೆಣ್ಮಕ್ಕಳು ಇನ್ನೊಂದು ತಿಂಗಳದಾಗ ಹೆಂಗರ ಮಾಡಿ ಅಮೇರಿಕಾದಾಗ ಹಡದು ಮಕ್ಕಳ್ನ ಅಲ್ಲಿ ಪ್ರಜೆ ಮಾಡಬೇಕು ಅಂತೇಳಿ ದವಾಖಾನಿ ಮುಂದ ಕ್ಕೂ ಹಚ್ಯಾರಂತ. ಇಂಡಿಯಾದಾರಾಗಿ ಅಮೇರಿಕಾದಾಗ ಹಡೆದು ಅಲ್ಲಿ ಪ್ರಜೆ ಮಾಡಬೇಕು ಅಂತ ಓಡ್ಯಾಡಾಕತ್ತಾರ್ನ ಏನನಬೇಕು. ದೇಶಭಕ್ತರು ಅನಬೇಕಾ, ದೇಶ ವಿರೋಧಿಗೋಳು ಅನಬೇಕೋ.

ಫೆಬ್ರವರಿ ಇಪ್ಪತರ ಮ್ಯಾಲ್ ಹಡದ ಅಮೇರಿಕಾದ ಸಿಟಿಜನ್ಶಿಪ್ ಸಿಗಲಿಲ್ಲ ಅಂದ್ರ ಎಲ್ಲಿ ಹೋಗಿ ಮಕ್ಕಳ ಬಿಡ್ತಾರು ಇವರು? ತಮ್ಮ ಮಾತೃ ದೇಶದ ಸಿಟಿಜನ್ ಶಿಪ್ ತಮ್ಮ ಮಕ್ಕಳಿಗೆ ಬ್ಯಾಡ ಅನ್ನಾರ ಮಕ್ಕಳಿಗೆ ಈ ದೇಶದ ಸಿಟಿಜನ್ ಶಿಪ್ ಕೊಡಬೇಕಾ? ಇದನ್ನ ನೋಡಿದ್ರ ತಾವು ಹುಟ್ಟಿದ ದೇಶದ ಬಗ್ಗೆ ಅವರಿಗೆ ಎಷ್ಟು ಗೌರವ ಐತಿ ಅಂತ ಗೊತ್ತಕ್ಕೇತಿ.

ಇಲ್ಲಿ ಸಾಲಿ ಕಲಿಮುಂದ ಸಾಲಿಂದ ಸಂಜಿಕ ಮನಿಗಿ ಬಂದ್ ಮ್ಯಾಲ್ ಅಪ್ಪಾ ಅವ್ವಗ ಏನರ ಸಣ್ಣಪುಟ್ಟ ಹೆಲ್ತ್ ಮಾಡಂದ್ರ ಟ್ಯೂಶನ್ನು, ಹೋಮ್ವರ್ಕು ಅಂತೇಳಿ ಒಂದು ಕಡ್ಡಿ ತಗದು ಅಕ್ಕಡೆ ಇಡದಂತಾರು. ಅಮೇರಿಕಾಕ ಹೈಯರ್ ಸ್ಟಡೀಗಿ ಹೋದಮ್ಯಾಲ್ ಅಲ್ಲಿ ಹೋಗಿ ಕಲಕೋಂತನ ಕಿರಾಣಿ ಅಂಗಡ್ಯಾಗ ಚೀಟ್ ಕಟ್ಟಿ ಜೀವನಾ ಮಾಡಿದ್ರ ಏನೂ ಮರ್ಯಾದಿ ಹೋಗುದಿಲ್ಲ, ಇಂತಾ ಮನಸ್ಥಿತಿ ಇರಾರಿಗೆ ನಮ್ಮ ದೇಶದ ಬಗ್ಗೆ ಎಲ್ಲಿ ಅಭಿಮಾನ ಇರತೈತಿ?

ಒಂದು ರೀತಿ ಟ್ರಂಪ್ ಮಾಡಿದ್ದು ಸರಿ ಐತಿ ಅನಸ್ತೈತಿ. ಅಮೇರಿಕಾದಾಗ ಮೆಕ್ಸಿಕೋದಾರ ಬಿಟ್ರ ಇಂಡಿಯಾದಾರ ಅಕ್ರಮ ವಲಸಿಗರು ಅದಾರಂತ, ಅಷ್ಟೊಂದು ಇಂಡಿಯಾದಾರು ಅಲ್ಲಿ ಇಲ್ಲಿಗಲಿ ವಾಸಾ ಮಾಡಾಕತಾರಂದ್ರ ಅಮೇರಿಕಾದಾರು ನಮ್ ದೇಶದಾರ್ನ ನಾವು ಬಂಗ್ಲಾ ದೇಶದಾರ್ನ ನೋಡಿದಂಗ ನೋಡ್ತಾರು ಅಂತ ಅನಸ್ರೈತಿ. ಇದೊಂದು ರೀತಿ ನಮ್ಮ ದೇಶದ ಇಮೇಜ್ ಹಾಳಮಾಡಿದಂಗ ಅನಸ್ತೈತಿ.

ಎಷ್ಟೋ ಜನಾ ಫಾರಿನರ್ಸ್ ನಮ್ಮ ದೇಶದ ಸಂಸ್ಕೃತಿ ಬಗ್ಗೆ ರಿಸ್ಪೆಕ್ಟ್ ಇಟ್ಕೊಂಡು ಮಹಾಕುಂಭಮೇಳಕ್ಕ ಬಂದು ತ್ರಿವೇಣಿ ಸಂಗಮದಾಗ ಪುಣ್ಯ ಸ್ನಾನಾ ಮಾಡಾಕತ್ತಾರು. ಅಮೇರಿಕಾದ ಜನಸಂಖ್ಯೆಕ್ಕಿಂತ ಹೆಚ್ಚಿನ ಜನರು ಕುಂಭ ಮೇಳದಾಗ ಬಂದು ನದ್ಯಾಗ ಜಳಕಾ ಮಾಡಾಕತ್ತಾರು ಅಂದ್ರ ಈ ದೇಶದ ಸಂಸ್ಕೃತಿಗೆ ಎಷ್ಟು ದೊಡ್ಡ ಶಕ್ತಿ ಐತಿ ಅಂತ ಅನಸ್ಸೆತಿ.

ಅಂತಾ ಸಂಸ್ಕ ತಿ ಭಾಗ ಆಗಿರೋ ಹೆಣ್ಮಕ್ಕಳ ಕೊಳ್ಳಾಗಿನ ತಾಳಿ ಗಟ್ಟಿಯಾಗಿ ಉಳಿಲಿಲ್ಲ ಅಂದ್ರ ಆಳು ಸರ್ಕಾರಕ್ಕ ಗಂಡಾತರ ಶುರುವಾಗೇತಿ ಅಂತ ಅರ್ಥ. ಈಗಿನ ಪರಿಸ್ಥಿತ್ಯಾಗ ಬಂಗಾರದ ಗಂಟನ್ಗಿಂತ ಕರಿಮಣಿ ತಾಳಿ ಸರಾನ ಚೊಲೊ ಕಾಣಾತೈತಿ ಅಂತ ಹೇಳಿ ಯಜಮಾನಿಗೆ ಸಮಾಧಾನ ಮಾಡಿದ್ನಿ.

-ಶಂಕರ ಪಾಗೋಜಿ
ಲೇಖಕರು, ಬೆಂಗಳೂರು

Related Posts

Leave a Reply

Your email address will not be published. Required fields are marked *